ಮೈಸೂರು: ಎಸ್ಐಆರ್ ಪ್ರಕ್ರಿಯೆ ವೇಳೆ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ.
ಮುಳ್ಳೂರು ಗ್ರಾಮದ ಮಹೇಂದ್ರಕುಮಾರ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಎಸ್ಐಆರ್ ಸಿಬ್ಬಂದಿ ದೂರಿನ ಮೇರೆಗೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕರ್ತವ್ಯನಿರತ ಸಿಬ್ಬಂದಿ ಲತಾ ಮನೆಗೆ ಹೋಗಿ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಜುಲೈ 13 ರಂದು ರಾತ್ರಿ ಲತಾ ಅವರ ಮನೆಗೆ ಕುಡಿದು ನುಗ್ಗಿದ್ದ ಮಹೇಂದ್ರ ಕುಮಾರ್ ಅವಾಚ್ಯವಾಗಿ ನಿಂದಿಸಿ ಕೈ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದ. 300 ಜನರ ಮತ ಹಾಳು ಮಾಡಿದ್ದೀಯಾ ಎಂದು ನಿಂದಿಸಿದ್ದ. ನಮ್ಮ ಗ್ರಾಮದಲ್ಲಿ ಹೇಗೆ ಕೆಲಸ ಮಾಡುತ್ತೀಯಾ ನೋಡುತ್ತೇನೆ. ನಿನ್ನನ್ನು ಕೆಲಸದಿಂದ ತೆಗೆದ ಹಾಕಿಸುವುದಾಗಿ ಬೆದರಿಕೆ ಹಾಕಿದ್ದ. ಬಿಳಿಗೆರೆ ಠಾಣೆಯಲ್ಲಿ ಮಹೇಂದ್ರ ಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

