ಮುಂಬೈ: ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಸಿನಿಮಾ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆಗಳನ್ನು ಪುಡಿಪುಡಿ ಮಾಡಿರುವ ಈ ಚಿತ್ರದ ಬಗ್ಗೆ ಈಗ ಚಿತ್ರದ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಈ ಚಿತ್ರವು ಹಿಂದಿ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಎಂದು ಅವರು ಬಣ್ಣಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಧ್ವನಿ ನೀಡಿರುವ ಜಾಸ್ಮಿನ್ ಸ್ಯಾಂಡ್ಲಾಸ್, ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, “ಧುರಂಧರ್ ಅಥವಾ ಧುರಂಧರ್ ದಿ ರಿವೇಂಜ್ ಹೊರತುಪಡಿಸಿ ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರನ್ನು ಈ ಮಟ್ಟಿಗೆ ಸಮ್ಮೋಹನಗೊಳಿಸಿದ ಮತ್ತೊಂದು ಚಿತ್ರವನ್ನು ನಾನು ನೋಡಿಲ್ಲ. ಈ ಸಿನಿಮಾ ಇಡೀ ಸೋಷಿಯಲ್ ಮೀಡಿಯಾವನ್ನು ಆವರಿಸಿಕೊಂಡಿದೆ” ಎಂದು ಹೇಳಿದ್ದಾರೆ.
ಚಿತ್ರಮಂದಿರಗಳಲ್ಲಿ ಟಿಕೆಟ್ ಸಿಗದಷ್ಟು ಕ್ರೇಜ್ ಸೃಷ್ಟಿಯಾಗಿರುವುದನ್ನು ಕಂಡು ಬೆರಗಾದ ಅವರು, ಇಂತಹ ಅದ್ಭುತ ಕಲಾಕೃತಿಯ ಭಾಗವಾಗಿರುವುದಕ್ಕೆ ತಮಗೆ ಹೆಮ್ಮೆ ಇದೆ ಎಂದಿದ್ದಾರೆ. “ನಮ್ಮ ತಂಡದ ಪ್ರಾಮಾಣಿಕ ಪ್ರಯತ್ನವೇ ಈ ಜಾಗತಿಕ ಯಶಸ್ಸಿಗೆ ಕಾರಣ. ಸಂಗೀತ ನಿರ್ದೇಶಕ ಶಾಶ್ವತ್ ಸಚದೇವ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ಪರಿಶ್ರಮಕ್ಕೆ ಸಿಕ್ಕ ಫಲವಿದು” ಎಂದು ಜಾಸ್ಮಿನ್ ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರದಲ್ಲಿ ಜಾಸ್ಮಿನ್ ಹಾಡಿರುವ ‘ಶರಾರತ್’ ಮತ್ತು ‘ಮೈ ಔರ್ ತೂ’ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.
ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಹಿಂದಿ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನದ ಕರಾಚಿಯಲ್ಲಿ ಭಾರತೀಯ ಗೂಢಚಾರಿಯೊಬ್ಬ ಭೂಗತ ಜಗತ್ತು ಮತ್ತು ರಾಜಕೀಯ ಜಾಲವನ್ನು ಹೇಗೆ ಭೇದಿಸುತ್ತಾನೆ ಎಂಬ ರೋಚಕ ಕಥೆ ಇಲ್ಲಿದೆ. ಇದರ ಮುಂದುವರಿದ ಭಾಗವಾದ ‘ಧುರಂಧರ್ 2’ ನಲ್ಲಿ ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಂಜಯ್ ದತ್ ಅವರಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

