ಚಿಕ್ಕಮಗಳೂರು: ಅಕ್ರಮ ಸಂಬಂಧ ಶಂಕೆಯಿಂದ ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ವೇಲ್ ನಿಂದ ಕತ್ತು ಹಿಸುಕಿ ಪತಿ ಕೊಲೆ ಮಾಡಿದ ಘಟನೆ ಬೀರೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ.
ಬೀರೂರಿನ ಮಾರ್ಗದ ಕ್ಯಾಂಪ್ ಚೌಡಮ್ಮ ದೇವಸ್ಥಾನ ಬೀದಿಯ ಮಮತಾ(33) ಕೊಲೆಯಾದವರು. ಆರೋಪಿ ಪತಿ ರಂಗನಾಥನನ್ನು ಪೊಲೀಸರು ಬಂಧಿಸಿದ್ದಾರೆ. 9 ವರ್ಷದ ಹಿಂದೆ ಮಮತಾ ರಂಗನಾಥ್ ಮದುವೆಯಾಗಿದ್ದು, ಬೀರೂರಿನಲ್ಲಿ ವಾಸವಾಗಿದ್ದರು. ರಂಗನಾಥ್ ಗಾರೆ ಕೆಲಸ ಮಾಡಿಕೊಂಡಿದ್ದ. ಮಮತಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ದಂಪತಿಗೆ 8 ವರ್ಷದ ಪುತ್ರ, 3 ವರ್ಷದ ಪುತ್ರಿ ಇದ್ದಾರೆ. ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಪತ್ನಿ ಮೇಲೆ ರಂಗನಾಥ ಹಲ್ಲೆ ಮಾಡುತ್ತಿದ್ದ. ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡುತ್ತಾನೆ ಎಂದು ಮಮತಾ ತಾಯಿಯ ಬಳಿ ಹೇಳಿಕೊಂಡಿದ್ದಳು. ತಾಯಿ ಪುತ್ರಿಯನ್ನು ಸಮಾಧಾನಪಡಿಸಿದ್ದರು.
ಬುಧವಾರ ತಡರಾತ್ರಿವರೆಗೆ ಪತ್ನಿಯೊಂದಿಗೆ ಜಗಳವಾಡಿದ್ದ ರಂಗನಾಥ ಹಲ್ಲೆ ನಡೆಸಿದ್ದಾನೆ. ಎಚ್ಚರವಾದ ಪುತ್ರ ಅಮ್ಮನಿಗೆ ಹೊಡೆಯಬೇಡ ಎಂದು ಬೇಡಿಕೊಂಡಿದ್ದಾನೆ. ಈ ವೇಳೆ ಮಮತಾ ಮೇಲೆ ಹಲ್ಲೆ ಮಾಡಿದ ರಂಗನಾಥ ವೇಲ್ ನಿಂದ ಕುತ್ತಿಗೆಗೆ ಬಿಗಿದಿದ್ದಾನೆ. ಒದ್ದಾಡಿ ಮಮತಾ ಪ್ರಾಣ ಬಿಟ್ಟ ಬಳಿಕ ಮಗನನ್ನು ಕರೆದುಕೊಂಡು ಮಲಗಿದ್ದಾನೆ.
ಬೆಳಗ್ಗೆ ಅಂಗಡಿಗೆ ಕರೆದುಕೊಂಡು ಹೋಗಿ ಚಾಕೊಲೇಟ್ ಕೊಡಿಸಿದ್ದಾನೆ. ವಿಷಯ ತಿಳಿದ ಮಮತಾ ಅವರ ತಾಯಿ ರತ್ನಮ್ಮ ಪೊಲೀಸರಿಗೆ ದೂರು ನೀಡಿದ್ದು, ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಡಿವೈಎಸ್ಪಿ ಪರಶುರಾಮ್, ಸಿಪಿಐ ರಫೀಕ್, ಪಿಎಸ್ಐ ಡಿ.ವಿ. ತಿಪ್ಪೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

