ಹೃದಯಾಘಾತ ಅಂದಾಕ್ಷಣ ಅದು ಅನಿರೀಕ್ಷಿತವಾಗಿ ಸಂಭವಿಸುವ ಆಪತ್ತು ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ, ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸುಮಾರು 90 ಲಕ್ಷ ಜನರ ಮೇಲೆ ನಡೆಸಿದ ಜಾಗತಿಕ ಸಂಶೋಧನೆಯೊಂದು ಬೆಚ್ಚಿಬೀಳಿಸುವ ಸತ್ಯವನ್ನು ಹೊರಹಾಕಿದೆ 2025ರ ಈ ವರದಿಯ ಪ್ರಕಾರ ಸಂಭವಿಸುವ ಶೇ. 99ರಷ್ಟು ಹೃದಯ ಸಂಬಂಧಿ ಕಾಯಿಲೆಗಳಿಗೆ ನಾವು ನಿರ್ಲಕ್ಷಿಸುವ ಕೇವಲ ನಾಲ್ಕು ಪ್ರಮುಖ ಆರೋಗ್ಯ ಸಮಸ್ಯೆಗಳೇ ಅಡಿಪಾಯವಂತೆ.
ಭಾರತದಲ್ಲಂತೂ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, 2014 ರಿಂದ 2019ರ ನಡುವೆ ಹೃದಯಾಘಾತದ ಪ್ರಕರಣಗಳು ಬರೋಬ್ಬರಿ ಶೇ. 50ರಷ್ಟು ಏರಿಕೆಯಾಗಿವೆ. ಜಡ ಜೀವನಶೈಲಿ, ಸದಾ ಕುಳಿತೇ ಕೆಲಸ ಮಾಡುವ ಸ್ವಭಾವ ಅಸಮತೋಲಿತ ಆಹಾರ ಮತ್ತು ಬೊಜ್ಜು ನಮ್ಮನ್ನು ಸಾವಿನ ದವಡೆಗೆ ದೂಡುತ್ತಿವೆ. ಸದ್ದಿಲ್ಲದೆ ದೇಹದೊಳಗೆ ಮನೆಮಾಡಿ ಕೊನೆಗೆ ಜೀವವನ್ನೇ ಹಿಂಡುವ ಈ ಸೈಲೆಂಟ್ ಕಿಲ್ಲರ್ಗಳ ಬಗ್ಗೆ ಎಚ್ಚೆತ್ತುಕೊಳ್ಳುವ ಸಮಯ ಈಗ ಬಂದಿದೆ
ಅಪೊಲೊ ಆಸ್ಪತ್ರೆಯ ವೈದ್ಯರಾದ ಡಾ. ಸುಧೀರ್ ಕುಮಾರ್ ಅವರ ಪ್ರಕಾರ, ಸುಮಾರು ಶೇ. 99ರಷ್ಟು ಹೃದಯಾಘಾತಗಳು ಮೊದಲೇ ಇರುವ ಆದರೆ ಪತ್ತೆಯಾಗದ ಆರೋಗ್ಯ ಸಮಸ್ಯೆಗಳಿಂದಲೇ ಸಂಭವಿಸುತ್ತವೆ. ನಾವು ಆರೋಗ್ಯವಾಗಿದ್ದೇವೆ ಎಂದು ಭಾವಿಸಬಹುದು, ಆದರೆ ಒಳಗೊಳಗೆ ಕಾಯಿಲೆ ಮೌನವಾಗಿ ಬೆಳೆಯುತ್ತಿರಬಹುದು. ಮುಖ್ಯವಾಗಿ ಈ ನಾಲ್ಕು ಅಂಶಗಳು ಮೊದಲ ಹೃದಯಾಘಾತಕ್ಕೆ ದಾರಿ ಮಾಡಿಕೊಡುತ್ತವೆ
ಆ 4 ಅಪಾಯಕಾರಿ ಸೈಲೆಂಟ್ ಕಿಲ್ಲರ್ಸ್ ಇವು: ಸಂಶೋಧಕರು ಗುರುತಿಸಿರುವಂತೆ, ಯಾವುದೇ ಪ್ರಾಣಾಪಾಯಕಾರಿ ಹೃದಯ ಸಮಸ್ಯೆಗೆ ಈ ಕೆಳಗಿನವುಗಳೇ ಅಡಿಪಾಯ:
ಅಧಿಕ ರಕ್ತದೊತ್ತಡ (High Blood Pressure)
ಹೆಚ್ಚಿನ ಕೊಲೆಸ್ಟ್ರಾಲ್ (High Cholesterol)
ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಅಂಶ (High Blood Sugar)
ತಂಬಾಕು ಸೇವನೆ (Tobacco Use)
ಅಧಿಕ ರಕ್ತದೊತ್ತಡವೇ ನಂಬರ್ 1 ಶತ್ರು
ಹೃದಯಾಘಾತ ಅಥವಾ ಹಾರ್ಟ್ ಫೈಲ್ಯೂರ್ ಅನುಭವಿಸಿದ ಶೇ.93ಕ್ಕಿಂತ ಹೆಚ್ಚು ಜನರಲ್ಲಿ ಹೈ ಬಿಪಿ ಸಮಸ್ಯೆ ಇದ್ದದ್ದು ಅಧ್ಯಯನದಿಂದ ಬಹಿರಂಗವಾಗಿದೆ. ಹೃದಯ ಆರೋಗ್ಯಕ್ಕೆ ಇದು ಅತ್ಯಂತ ದೊಡ್ಡ ಮೌನ ಶತ್ರು ಎನ್ನಲಾಗಿದೆ.
ಯುವತಿಯರಿಗೂ ತಪ್ಪಿಲ್ಲ ಅಪಾಯ
60 ವರ್ಷದೊಳಗಿನ ಮಹಿಳೆಯರಿಗೆ ಹೃದಯ ಸಮಸ್ಯೆಗಳ ಅಪಾಯ ಕಡಿಮೆ ಎಂಬ ನಂಬಿಕೆ ಈಗ ತಪ್ಪು ಎಂದು ಈ ಅಧ್ಯಯನ ಸ್ಪಷ್ಟಪಡಿಸಿದೆ. ಈ ವಯಸ್ಸಿನ ಮಹಿಳೆಯರಲ್ಲಿ ಸಂಭವಿಸಿದ ಶೇ.95ರಷ್ಟು ಹೃದಯ ಸಂಬಂಧಿತ ಘಟನೆಗಳಿಗೆ ಕೇವಲ ನಾಲ್ಕು ಪ್ರಮುಖ ಕಾರಣಗಳೇ ಹೊಣೆ ಎನ್ನಲಾಗಿದೆ.
ಪತ್ತೆಯಾಗದೇ ಉಳಿಯುವ ಮೌನ ರೋಗಗಳು
ಬಹುತೇಕ ಜನರು ನಾನು ಆರೋಗ್ಯವಾಗಿದ್ದೇನೆ ಎಂದು ಭಾವಿಸುತ್ತಾರೆ. ಆದರೆ ಈ ನಾಲ್ಕು ಸಮಸ್ಯೆಗಳು ಯಾವುದೇ ಲಕ್ಷಣವಿಲ್ಲದೇ ದೇಹದೊಳಗೆ ನಿಧಾನವಾಗಿ ಹಾನಿ ಮಾಡುತ್ತಿರುತ್ತವೆ ಇದು ಹಠಾತ್ ಹೃದಯಾಘಾತಕ್ಕೆ ಕಾರಣವಾಗಬಹುದು.
ಹೃದಯಾಘಾತ ತಡೆಯಲು ಇಂದೇ ಈ ಬದಲಾವಣೆ ಮಾಡಿಕೊಳ್ಳಿ:
ಹೃದಯಾಘಾತದ ಅಪಾಯವು ಕಣ್ಣೆದುರಿಗಿದ್ದರೂ, ನಮ್ಮ ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದನ್ನು ಖಂಡಿತವಾಗಿಯೂ ತಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಅದಕ್ಕಾಗಿ ನೀವು ಪಾಲಿಸಬೇಕಾದ ಪಂಚಸೂತ್ರಗಳು ಇಲ್ಲಿವೆ:
ಆಹಾರವೇ ಮದ್ದು: ನಿಮ್ಮ ತಟ್ಟೆಯಲ್ಲಿ ಸದಾ ಹಣ್ಣು, ಹಸಿರು ತರಕಾರಿ ಮತ್ತು ನಾರಿನಂಶವಿರುವ ಧಾನ್ಯಗಳಿರಲಿ. ಸಂಸ್ಕರಿಸಿದ ಆಹಾರ ಮತ್ತು ಅತಿಯಾದ ಉಪ್ಪಿನಿಂದ ದೂರವಿರಿ.
ದಿನಕ್ಕೆ ಕನಿಷ್ಠ 30 ನಿಮಿಷಗಳ ನಡಿಗೆ ಅಥವಾ ವ್ಯಾಯಾಮವು ನಿಮ್ಮ ಹೃದಯದ ಸ್ನಾಯುಗಳನ್ನು ಬಲಪಡಿಸಿ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಧೂಮಪಾನ ಅಥವಾ ತಂಬಾಕು ಸೇವನೆಯು ಹೃದಯದ ರಕ್ತನಾಳಗಳನ್ನು ನೇರವಾಗಿ ಹಾನಿಗೊಳಿಸುತ್ತದೆ. ಹೃದಯದ ಆರೋಗ್ಯಕ್ಕೆ ಇದನ್ನು ಇಂದೇ ತ್ಯಜಿಸಿ.
ಅತಿಯಾದ ಮಾನಸಿಕ ಒತ್ತಡವು ಸದ್ದಿಲ್ಲದೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಯೋಗ ಅಥವಾ ಧ್ಯಾನದ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿಡಿ.
ನಿವರ್ಷಕ್ಕೊಮ್ಮೆಯಾದರೂ ಬಿಪಿ (BP), ಶುಗರ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಆರಂಭಿಕ ಹಂತದ ಏರುಪೇರನ್ನು ಪತ್ತೆಹಚ್ಚುವುದು ಜೀವ ಉಳಿಸಬಹುದು.

