HomeKarnatakaಸಾಮಾಜಿಕ ನ್ಯಾಯದ ಲೇಖನ ವಿವಾದ: ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದ ಲೇಖನ ವಿವಾದ: ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಾಮಾಜಿಕ ದಿನದ ಆಚರಣೆಯ ಅಂಗವಾಗಿ ಪತ್ರಿಕೆಯೊಂದಕ್ಕೆ ನಾನು ಬರೆದಿದ್ದ ಲೇಖನ ರಾಜ್ಯದ ರಾಜಕೀಯ ವಲಯದಲ್ಲಿ ಬಹುಮುಖಿ ಚರ್ಚೆಗೆ ಒಳಗಾಗಿದೆ. ನೀರು ನಿಂತಲ್ಲಿಯೇ ನಿಂತು ಮಡುಗಟ್ಟಿಹೋದರೆ ಕೆಸರಾಗುತ್ತದೆ, ಹರಿಯುತ್ತಿದ್ದರೆ ಅದು ತಿಳಿಯಾಗುತ್ತಾ ಹೋಗುತ್ತದೆ. ಸಾಮಾಜಿಕ ವ್ಯವಸ್ಥೆ ಕೂಡಾ ಹಾಗೆಯೇ ಪಟ್ಟಭದ್ರವಾಗಿ ಉಳಿಯದೆ ಚಲನಶೀಲತೆ ಪಡೆದುಕೊಂಡರೆ ಅದು ಜನಪರವಾಗಿ ಪರಿವರ್ತನೆಯಾಗುತ್ತದೆ. ಈ ದೃಷ್ಟಿಯಿಂದ ನನ್ನ ಲೇಖನದ ಬಗೆಗಿನ ಚರ್ಚೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ಬಗ್ಗೆ ನಾನು ಇದೇ ಮೊದಲ ಬಾರಿ ಮಾತನಾಡಿದ್ದಲ್ಲ, ನನ್ನ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ನೋಡುತ್ತಾ ಬಂದವರಿಗೆ ಇದು ಗೊತ್ತಿರುತ್ತದೆ. ಅಧಿಕಾರ ಇರಲಿ, ಇಲ್ಲದೆ ಇರಲಿ ಸಾಮಾಜಿಕ ನ್ಯಾಯದ ಪರವಾದ ನನ್ನ ನಿಲುವು ಅಚಲ. ನಮ್ಮಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ನನ್ನನ್ನು ಟೀಕಿಸುತ್ತಿರುವ ರಾಜಕಾರಣಿಗಳಿಗಿಂತ ಹೆಚ್ಚಿನ ಸ್ಪಷ್ಟತೆ ನನಗಿದೆ. ಈ ಬಗ್ಗೆ ನಾನು ಸಾರ್ವಜನಿಕ ಸಂವಾದಕ್ಕೆ ಸಿದ್ಧವಾಗಿದ್ದೇನೆ ಎಂದಿದ್ದಾರೆ.

ನನ್ನ ಲೇಖನದ ಬಗ್ಗೆ ಜಾತ್ಯತೀತ ಜನತಾದಳದ ನಾಯಕರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ವ್ಯಕಪಡಿಸಿರುವ ಪ್ರತಿಕ್ರಿಯೆ ಓದಿ ಆಶ್ಚರ್ಯವಾಗಿಲ್ಲ, ‘’ಸಿದ್ದರಾಮಯ್ಯನವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ” ಎಂಬ ಅವರ ಆರೋಪವನ್ನು ತಮಾಷೆಯಾಗಿ ಸ್ವೀಕರಿಸಿದ್ದೇನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಮಾರಸ್ವಾಮಿಯವರು ಮತ್ತು ಅವರ ಪೂಜ್ಯ ತಂದೆಯವರಾದ ಹೆಚ್.ಡಿ.ದೇವೇಗೌಡರು ಖಂಡಿತಾ ಜಾತಿವಾದಿಗಳಲ್ಲ, ಅವರು ಸ್ವಜಾತಿ ವಿರೋಧಿಗಳು. ಅದಕ್ಕಿಂತಲೂ ಮುಖ್ಯವಾಗ ಕುಟುಂಬವಾದಿಗಳು. ಇವರಿಗೆ ತಮ್ಮ ಜಾತಿ ಒಂದು ಓಟ್ ಬ್ಯಾಂಕ್ ಅಷ್ಟೆ. ತಂದೆ ಮತ್ತು ಮಕ್ಕಳು ತಮ್ಮ ಕುಟುಂಬದ ಸ್ವಾರ್ಥಕ್ಕಾಗಿ ರಾಜಕೀಯ ಕ್ಷೇತ್ರದಲ್ಲಿ ಉಳಿದವರನ್ನು ಬಿಟ್ಟುಬಿಡಿ, ಸ್ವಜಾತಿ ನಾಯಕರು ಕೂಡಾ ಬೆಳೆಯದಂತೆ ಒಬ್ಬೊಬ್ಬರನ್ನೇ ಮುಗಿಸುತ್ತಾ ಬಂದವರು. “ಹಿಂದೆ, ಇಂದು ಮತ್ತು ಮುಂದೆ ಜಾತ್ಯತೀತ ಜನತಾದಳದ ತುತ್ತತುದಿಯ ನಾಯಕರು ಗೌಡರ ಕುಟುಂಬದವರೇ ಆಗಿರುತ್ತಾರೆ” ಎನ್ನುವುದು ಸತ್ಯ ಎಂದಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹೆಚ್.ಡಿ.ದೇವೇಗೌಡರು ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ಜೆಡಿ(ಎಸ್) ಪಕ್ಷದಲ್ಲಿ ಬೆಳೆಸಿದ್ದಾರೆ ಎಂದು ವಿನಯಪೂರ್ವಕವಾಗಿ ಕೇಳಬಯಸುವೆ. ಹಾಸನದ ಪುಟ್ಟಸ್ವಾಮಿಗೌಡ, ಸಿ.ಎಸ್.ಪುಟ್ಟೇಗೌಡ, ಜವರೇಗೌಡ, ಕೆ.ಎಂ.ವಿಶ್ವನಾಥ್, ಹನುಮೇಗೌಡ, ಮಂಡ್ಯದ ಕೆ.ಎನ್.ನಾಗೇಗೌಡ, ಕೆ.ಆರ್.ಪೇಟೆ ಕೃಷ್ಣ, ವೈ.ಕೆ.ರಾಮಯ್ಯ, ಸಿ.ಬೈರೇಗೌಡ, ಬಚ್ಚೇಗೌಡ, ಬಿ.ಎಲ್.ಶಂಕರ್, ಸಿ.ನಾರಾಯಣಸ್ವಾಮಿ, ಚೆಲುವರಾಯ ಸ್ವಾಮಿ ಮೊದಲಾದವರೆಲ್ಲ ಯಾಕೆ ದೇವೇಗೌಡರನ್ನು ಬಿಟ್ಟು ಹೊರಬಂದರು ಎನ್ನುವುದನ್ನು ನಾನು ವಿವರಿಸಿ ಹೇಳಬೇಕಾಗಿಲ್ಲ.

ಒಕ್ಕಲಿಗ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಎಸ್.ಎಂ.ಕೃಷ್ಣ ವರೆಗೆ ನೂರಾರು ಒಕ್ಕಲಿಗ ನಾಯಕರನ್ನು ಬೆಳೆಸಿದೆ. ದೇವೇಗೌಡರಿಂದ ಮೋಸಕ್ಕೊಳಗಾದ ನಾಯಕರಿಗೆ ಅವಕಾಶ ನೀಡಿ ರಾಜಕೀಯವಾಗಿ ಬೆಳೆಸುತ್ತಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದರು.

ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡಲು ಸಾಧ್ಯ ಇರುವವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್, ಹೀಗೆ ನಮ್ಮಲ್ಲಿರುವ ಒಕ್ಕಲಿಗರ ನಾಯಕರ ದೊಡ್ಡ ಪಟ್ಟಿಯೇ ಇದೆ. ಜೆಡಿ(ಎಸ್)ನಲ್ಲಿ ಎಷ್ಟು ಮಂದಿ ಒಕ್ಕಲಿಗ ನಾಯಕರಿದ್ದಾರೆ. ಮುಂದೊಂದು ದಿನ ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಯಾರಾದರೂ ರಾಜ್ಯದ ಮುಖ್ಯಮಂತ್ರಿಗಳಾದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ ಎನ್ನುವುದನ್ನು ನಾನು ಒತ್ತು ಕೊಟ್ಟು ಹೇಳುತ್ತಿದ್ದೇನೆ.

ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷ. ಈ ಸೈದ್ಧಾಂತಿಕ ಬದ್ಧತೆಯನ್ನು ಕೇವಲ ಮಾತಿನ ಮೂಲಕ ಮಾತ್ರವಲ್ಲ ಕೃತಿಯ ಮೂಲಕವೂ ಪಕ್ಷ ಮಾಡಿ ತೋರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು ಮುಖ್ಯಮಂತ್ರಿಗಳಾಗಿದ್ದಾರೆ, ಹಿಂದುಳಿದ ಜಾತಿಗೆ ಸೇರಿದ ನನ್ನನ್ನು ಗುರುತಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟಿರುವುದು ಕೂಡಾ ಕಾಂಗ್ರೆಸ್ ಪಕ್ಷ. ಇದಕ್ಕಾಗಿ ನಾನು ಪಕ್ಷದ ನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಆಭಾರಿಯಾಗಿದ್ದೇನೆ.

ಜಾತಿಯಿಂದ ಮಾತ್ರವಲ್ಲ, ಅರ್ಹತೆಯ ಬಲದಿಂದಲೇ ಮುಖ್ಯಮಂತ್ರಿಯಾಗುವಂತಹ ದಲಿತ ಸಮುದಾಯದ ನಾಯಕರು ಕೂಡಾ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಮುಂದೊಂದ ದಿನ ದಲಿತ ಸಮುದಾಯದಿಂದ ಯಾರಾದಾರೂ ರಾಜ್ಯದ ಮುಖ್ಯಮಂತ್ರಿಯಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ ಎಂದಿದ್ದಾರೆ.

ಇಂತಹದ್ದೊಂದು ಆಶಯವನ್ನು ಕೂಡಾ ವ್ಯಕ್ತಪಡಿಸುವ ಸ್ಥಿತಿಯಲ್ಲಿ ರಾಜ್ಯದ ಜೆಡಿಎಸ್ ಇಲ್ಲವೇ ಬಿಜೆಪಿ ಇದೆಯೇ? ಇದು ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿ, ಜೆಡಿಎಸ್ ಗಳಿಗೆಇರುವ ವ್ಯತ್ಯಾಸ. ಆದ್ದರಿಂದ ನನ್ನ ವಿರುದ್ಧ ಜಾತಿ ರಾಜಕೀಯದ ಆರೋಪ ಮಾಡುತ್ತಿರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular