HomeKarnatakaಪೆಟ್ರೋಲ್-ಡೀಸೆಲ್ ದರ ಏರಿಕೆ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ...

ಪೆಟ್ರೋಲ್-ಡೀಸೆಲ್ ದರ ಏರಿಕೆ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ; ಮತ್ತೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ಬಳಿಕವೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ, ದಕ್ಷಿಣ ಭಾರತದ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕೇಂದ್ರದ ಮೋದಿ ಸರ್ಕಾರ ರಾಜ್ಯದ ಪಾಲಿನ ಹಣವನ್ನು ಕೊಡದೇ ಇರುವುದರಿಂದ ಅನಿವಾರ್ಯವಾಗಿ ತೆರಿಗೆ ಹೆಚ್ಚಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಹೇಳಿದರು.

2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅವರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ ಹೆಚ್ಚಳದಿಂದ ಸಂಗ್ರಹವಾಗುವ ಅಂದಾಜು ಮೂರು ಸಾವಿರ ಕೋಟಿ ರೂಪಾಯಿಗಳು ರಾಜ್ಯದ ಖಜಾನೆಗೆ ಸಂದಾಯವಾಗುತ್ತದೆ, ಆ ಹಣ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗವಾಗುತ್ತದೆ ಅದು ನಮ್ಮ ಜೇಬಿಗೆ ಹೋಗುವುದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಪ್ರತಿಯೊಂದು ಯೋಜನೆಗಳಲ್ಲಿಯೂ 40% ತೆರಿಗೆ ಹಣ ಬಿಜೆಪಿ ನಾಯಕರ ಜೇಬಿಗೆ ಹೋಗುತ್ತಿತ್ತು. ಈ ರೀತಿ ಅಂದಾಜು ಒಂದುವರೆ ಲಕ್ಷ ಕೋಟಿ ರೂಪಾಯಿಗಳಷ್ಟು ರಾಜ್ಯದ ಜನರ ಬೆವರಗಳಿಕೆಯ ತೆರಿಗೆ ಹಣವನ್ನು ಈ ಬಿಜೆಪಿ ನಾಯಕರ ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದಾರೆ ಎಂದರು.

ಇಂತಹ ಲೂಟಿಕೋರ, ಭ್ರಷ್ಟ, ಜನವಿರೋಧಿ ಬಿಜೆಪಿ ನಾಯಕರಿಗೆ ಜನಕಲ್ಯಾಣಕ್ಕಾಗಿ ಸ್ಪಲ್ಪ ಪ್ರಮಾಣದ ತೆರಿಗೆ ಹೆಚ್ಚಿಸಿದ್ದನ್ನು ಪ್ರಶ್ನಿಸುವ ಯೋಗ್ಯತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿದೆ. ಇಷ್ಟೂ ಹಣ ರಾಜ್ಯದ ಎಲ್ಲಾ ಜಾತಿ-ಸಮುದಾಯಗಳ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೋಗುತ್ತದೆ. ಸದ್ಯದ ಅಲ್ಪ ಪ್ರಮಾಣದ ಡೀಸೆಲ್-ಪೆಟ್ರೋಲ್ ತೆರಿಗೆ ಹೆಚ್ಚಳದಿಂದ ನಮಗೆ ಹೆಚ್ಚುವರಿಯಾಗಿ ಸಂಪನ್ಮೂಲ ಸಂಗ್ರಹ ಆಗುವುದು ಕೇವಲ 3 ಸಾವಿರ ಕೋಟಿ ರೂಪಾಯಿ ಮಾತ್ರ. ಆದರೆ ಗ್ಯಾರಂಟಿಗಳಿಗೆ ನಾವು ಕೊಡುತ್ತಿರುವುದು 60 ಸಾವಿರ ಕೋಟಿ ರೂಪಾಯಿ ಎಂದು ವಿವರಿಸಿದರು.

ಜನರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಸಂಪನ್ಮೂಲ ಕ್ರೋಢೀಕರಣದ ಉದ್ದೇಶದೊಂದಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯಲ್ಲಿ 3 ರೂ. ಗಳಷ್ಟು ಹೆಚ್ಚಿಸಲಾಗಿದೆ. 3 ರೂ. ಗಳಷ್ಟು ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಮಾಡಿದ್ದರೂ, ದಕ್ಷಿಣದ ಇತರ ರಾಜ್ಯಗಳು ಹಾಗೂ ಬಿಜೆಪಿ ಆಡಳಿತ ಇರುವ ರಾಜ್ಯಗಳಿಗಿಂತ ಕಡಿಮೆ ಇದೆ.

ಕೇಂದ್ರ ಸರ್ಕಾರ ಜಿ.ಎಸ್.ಟಿ. ವ್ಯವಸ್ಥೆ ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಇರುವ ಅವಕಾಶ ಸೀಮಿತಗೊಂಡಿದೆ. ಕೇಂದ್ರ ಸರ್ಕಾರ ಜಿ.ಎಸ್.ಟಿ. , ಆದಾಯ ತೆರಿಗೆ, ಕೇಂದ್ರ ಅಬಕಾರಿ ಸುಂಕ ಮೊದಲಾದ ಮೂಲಗಳಿಂದ ತೆರಿಗೆ ಸಂಗ್ರಹಿಸುತ್ತದೆ. ರಾಜ್ಯ ಸರ್ಕಾರಕ್ಕೆ ಕೇವಲ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ವಾಹನ ತೆರಿಗೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹಾಗೂ ಮದ್ಯದ ಮೇಲಿನ ಮಾರಾಟ ತೆರಿಗೆ ಹೊರತು ಪಡಿಸಿ ಯಾವುದೇ ಮೂಲಗಳಿಲ್ಲ.

ಈ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಪೆಟ್ರೋಲ್‌ ಡೀಸೆಲ್‌ ಬೆಲೆಗೆ ಹೋಲಿಸಿದರೆ ರಾಜ್ಯದ ದರಗಳು ಕಡಿಮೆ ಇರುವುದು ಗಮನಿಸಿ, ರಾಜ್ಯ ಸರ್ಕಾರ ಅಲ್ಪ ಪ್ರಮಾಣದ ತೆರಿಗೆ ಹೆಚ್ಚಳ ಮಾಡಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು.

ಈ ಬಗ್ಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು. ಡಾ. ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್‌ ಇತ್ತು. 2015 ರಲ್ಲಿ ಈ ಬೆಲೆ ಅರ್ಧಕ್ಕರ್ಧ ಕಡಿಮೆಯಾದರೂ, ಬೆಲೆ ಇಳಿಸಿ, ಜನರ ಹೊರೆ ಕಡಿಮೆ ಮಾಡುವ ಕಾಳಜಿಯನ್ನು ನರೇಂದ್ರ ಮೋದಿಯವರು ತೋರಲಿಲ್ಲ. ಬಿಜೆಪಿಯವರು ಯಾರ ವಿರುದ್ಧ ಹೋರಾಡಬೇಕು ಎಂದು ಪ್ರಶ್ನಿಸಿದರು?
ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಸರ್ಕಾರದಿಂದ ನಿರಂತರ ಅನ್ಯಾಯವಾಗುತ್ತ ಬಂದಿದ್ದರೂ, ಬಿಜೆಪಿಯವರು ದನಿ ಎತ್ತಿಲ್ಲ? ತೆರಿಗೆ ಅನ್ಯಾಯವಾದಾಗ ಸಂಸದರು ಈ ವಿಷಯದ ಕುರಿತು ಮಾತನಾಡಿಲ್ಲ; ರಾಜ್ಯಕ್ಕೆ 15ನೇ ಹಣಕಾಸು ಆಯೋಗವು ವಿಶೇಷ ಅನುದಾನ ನೀಡುವಂತ ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ನಿರ್ಮಲಾ ಸೀತಾರಾಮನ್‌ ಅವರು 5,000 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದರೂ, ಬಿಡಿಗಾಸೂ ನೀಡಿಲ್ಲ. ಈ ವಿಷಯಗಳ ಕುರಿತು ಬಿಜೆಪಿಯವರು ದನಿ ಎತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular