ಬೆಂಗಳೂರಿನ ಅರಮನೆ ಮೈದಾನದಲ್ಲಿ ದೇವಾಂಗ ಸಂಘದ ಶತಮಾನೋತ್ಸವ ಸಮಾರಂಭ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ, ಸಂಘದಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸಮಾರಂಭದಲ್ಲಿ ದೇವಾಂಗ ಸಂಘ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ. ಈ ಕುರಿತು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ದೇವಾಂಗ ಸಂಘದ ಬೇಡಿಕೆಗಳ ಕುರಿತು ಸಂಘದ ನಿರ್ದೇಶಕ ಗಂಟೆ ಕುಮಾರಸ್ವಾಮಿ ಕನ್ನಡ ದುನಿಯಾ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ರಶ್ನೆ ಸರ್ಕಾರದ ಮುಂದೆ ದೇವಾಂಗ ಸಂಘದ ಬೇಡಿಕೆಗಳು ಏನು?
ಉತ್ತರ: ದೇವಾಂಗ ಸಂಘದ ವಿವಿಧ ಬೇಡಿಕೆಗಳ ಕುರಿತು ಹಲವಾರು ಬಾರಿ ಸರ್ಕಾರಕ್ಕೆ, ಸಚಿವರಿಗೆ ಮನವಿಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈಗ ಅವುಗಳನ್ನು ಕ್ರೋಢಿಕರಿಸಿ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಸಲ್ಲಿಕೆ ಮಾಡಲಾಗಿದೆ.
ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ.
ಪ್ರಶ್ನೆ: ದೇವಾಂಗ ಸಂಘದ ವಸತಿ ನಿಲಯ, ಕಟ್ಟಡಕ್ಕೆ ಜಾಗಕ್ಕಾಗಿ ಬೇಡಿಕೆ ಇದೆಯೇ?
ಉತ್ತರ: ನೇಕಾರರ ಅಭಿವೃದ್ಧಿ ನಿಗಮದ ಹೊರತಾಗಿ ಸಂಘದ ಕಟ್ಟಡದ ನಿರ್ಮಾಣಕ್ಕೆ, ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ, ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಜಾಗವನ್ನು ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ. ಬೆಂಗಳೂರು ನಗರದ ಹೊರವಲಯದಲ್ಲಿ ಭೂಮಿಯನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿಗಳು ಸಹ ದೇವಾಂಗ ಸಂಘದ ಬಡಾವಣೆಗೆ ಭೂಮಿ ನೀಡುವ ಕುರಿತು ಪರಿಶೀಲನೆ ಮಾಡಿ ತೀರ್ಮಾನಿಸಲಾಗುತ್ತದೆ ಎಂದು ಭರವಸೆ ಕೊಟ್ಟಿದ್ದಾರೆ.
ಪ್ರಶ್ನೆ: ನೇಕಾರರಿಗೆ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳು ಏನು?
ಉತ್ತರ: ರೈತರು ಆಹಾರ ಪೂರೈಸಿದಂತೆ, ನೇಕಾರರು ಬಟ್ಟೆಯನ್ನು ತಯಾರಿಸುತ್ತಾರೆ. ಈ ಸಮುದಾಯದ ಸಂಘಟನೆಯಾಗುವುದು ಅಗತ್ಯ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ನೇಕಾರರಿಗೆ ಅನುಕೂಲವಾಗುವಂತೆ ವಿದ್ಯುತ್ ಸಬ್ಸಿಡಿ ನೀಡಲು ಮನವಿ ಸಲ್ಲಿಕೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರು 2004-05ರಲ್ಲಿ ಹಣಕಾಸು ಸಚಿವರಾಗಿದ್ದಾಗ ನೇಕಾರರಿಗೆ ತಲಾ ಯೂನಿಟ್ ಗೆ 4.20 ರೂ. ಇದ್ದ ವಿದ್ಯುತ್ ದರವನ್ನು 1.20 ರೂ.ಗಳಿಗೆ ಕಡಿತಗೊಳಿಸಿದ್ದರು. 2013-18ರ ತನಕ ಮುಖ್ಯಮಂತ್ರಿಯಾಗಿದ್ದಾಗಲೂ ಸಬ್ಸಿಡಿ ನೀಡಿದ್ದರು.
ಈ ಯೋಜನೆಯಿಂದ ಸಮುದಾಯದ ಜನರಿಗೆ ಅನುಕೂಲವಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಸಬ್ಸಿಡಿಯಲ್ಲಿ ಬದಲಾವಣೆ ಮಾಡಲಾಗಿದೆ. ಪುನಃ ಸಬ್ಸಿಡಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.
ಪ್ರಶ್ನೆ: ದೇವಾಂಗ ಸಂಘದ ಸಂಘಟನೆ ಕುರಿತು ಮುಂದಿನ ಯೋಜನೆಗಳೇನು?
ಉತ್ತರ: ಈ ಸಮುದಾಯದ ಸಂಘಟನೆಯಾಗುವುದು ಅಗತ್ಯ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸುಮಾರು 80 ಪಂಗಡಗಳು ಬರುತ್ತವೆ. ಈ ಪಂಗಡಗಳಲ್ಲಿ ಕೊಟ್ಟು ತೆಗೆದುಕೊಳ್ಳುವುದು ಆಗಬೇಕು. ಸಂಘಟನೆಯ ಮೂಲಕವೇ ಶಕ್ತಿ ಬೆಳೆಯುತ್ತದೆ. ಹಿಂದುಳಿದವರು ಸಂಘಟಿಸಿದರೆ ಜಾತಿಯತೆಯಾಗುವುದಿಲ್ಲ ಎಂದು ಚಿಂತಕರಾದ ಲೋಹಿಯಾ ಅವರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಸಮಾರಂಭದಲ್ಲಿಯೇ ಹೇಳಿದರು.
ಪ್ರಶ್ನೆ: ಮುಖ್ಯಮಂತ್ರಿಗಳು ಕೊಟ್ಟ ಭರವಸೆಗಳೇನು?
ಉತ್ತರ: ಸಮಾರಂಭದಲ್ಲಿಯೇ ಮುಖ್ಯಮಂತ್ರಿಗಳು ಹಲವು ವಿಚಾರದ ಕುರಿತು ಮಾತನಾಡಿದರು. ದೇವಾಂಗ ಸಂಘವು ಮಹಿಳಾ ಸಬಲೀಕರಣಕ್ಕೆ ನೆರವು ನೀಡುತ್ತಿದೆ. ಮಹಿಳಾ ವಸತಿನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಶ್ರೀಮಂತ ಇತಿಹಾಸವಿರುವ ಈ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸಮುದಾಯದಲ್ಲಿ ಹಲವು ಗುಂಪುಗಳಿದ್ದರೂ, ಒಂದೇ ಶಕ್ತಿಯಾಗಿ ಸಂಘಟಿತರಾಗಬೇಕು ಎಂದು ಹೇಳಿದ್ದಾರೆ.
ಸಮಾಜದ ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ಸಮುದಾಯದ ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂದು ಹೇಳಿದ್ದಾರೆ. ಸಮುದಾಯದ ಜನಪ್ರತಿನಿಧಿಗಳು ಹಲವರು ಶಾಸಕರು ಮತ್ತು ಎಂಎಲ್ ಸಿ ಗಳಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಜಮೀನು ನೀಡುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ಭರವಸೆ ಕೊಟ್ಟಿದ್ದಾರೆ.

