ಆಡಳಿತಾತ್ಮಕ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ರಚನೆ: ಸಿಎಂ ಸ್ಪಷ್ಟನೆ

ವಿಜಯನಗರ: ಗ್ರೇಟರ್ ಬೆಂಗಳೂರು ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ವಿಭಾಗಗಳನ್ನು ರಚಿಸಬೇಕೆಂದು ಅಂದಿನ ಬಿಜೆಪಿಯ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ರವರು ಯೋಜಿಸಿದ್ದರು. ಆಡಳಿತದ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿದೇವೆ ಎಂದರು.

ವಿಜಯನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ನೆಲೆಸಿದ್ದು, ಈ ನಗರದ ಆಡಳಿತವನ್ನು ಒಂದು ಮಹಾನಗರ ಪಾಲಿಕೆ ನಿರ್ವಹಿಸುವುದು ಕಷ್ಟಸಾಧ್ಯ. ಆದ್ದರಿಂದ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ಮಹಾನಗರಕ್ಕೆ ಮೂರು ಅಥವಾ ಹೆಚ್ಚು ಮಹಾನಗರಪಾಲಿಕೆಗಳನ್ನು ರಚಿಸಬೇಕೆಂಬ ಚಿಂತನೆಯಿಂದ ನನ್ನ ಹಿಂದಿನ ಮುಖ್ಯಮಂತ್ರಿಯ ಅವಧಿಯಲ್ಲಿ ಬಿ.ಎಸ್.ಪಾಟೀಲ್, ಸಿದ್ದಯ್ಯ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಆದ್ದರಿಂದ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವುದರಿಂದ, ಈ ಚಿಂತನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.

ಇದೇ ವೇಳೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅನರ್ಹತೆಯ ಕುರಿತು ಪ್ರತಿಕ್ರಿಯಿಸಿ, ನ್ಯಾಯಾಲಯ ಅವರಿಗೆ ಏಳು ವರ್ಷಗಳ ಶಿಕ್ಷೆಗೆ ಗುರಿಪಡಿಸಿದ್ದು, ಸಂವಿಧಾನದಂತೆ ಅವರು ಅನರ್ಹರಾಗುತ್ತಾರೆ. ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ, ಪಕ್ಷದ ತೀರ್ಮಾನದಂತೆ ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಗಂಗಾವತಿ ವಿಧಾನಸಭೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ಗೆಲ್ಲುತ್ತದೆ. ಪ್ರಜಾಪ್ರಭುತ್ವದಲ್ಲಿ ಟೀಕಿಸುವುದು ಸಹಜ. ಆದರೆ ನಮ್ಮ ಸರ್ಕಾರದ ಸಾಧನೆ, ನಮ್ಮ ಬದ್ಧತೆಯ ಬಗ್ಗೆ ಜನರಿಗೆ ತಿಳಿದೇ ತಿಳಿಯುತ್ತದೆ ಎಂದರು.

2008-2013ರವರೆಗೆ ವಿರೋಧಪಕ್ಷದ ನಾಯಕನಾಗಿ, ಲೋಕಾಯುಕ್ತ ಸಂತೋಷ್ ಹೆಗಡೆ ಅವರ ಅಕ್ರಮ ಗಣಿಗಾರಿಕೆಯ ವರದಿ ಆಧರಿಸಿ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಅಂದು ಬಿಜೆಪಿಸರ್ಕಾರದ ಅದನ್ನು ವಿರೋಧಿಸಿತ್ತು. ಅಂದು ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಹೋರಾಟಕ್ಕೆ ಇಂದು ಫಲ ದೊರೆತಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಶಿಕ್ಷೆಯಾಗಬೇಕು ಹಾಗೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು ಎಂದು ತಿಳಿಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read