ಬೆಂಗಳೂರು: ಬೆಂಗಳೂರಿನಲ್ಲಿ ತಂದೆ, ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಶ್ವೇತಾ ಬಂಧಿತ ಆರೋಪಿ.
ಪ್ರಿಯಕರನ ಜೊತೆ ಸೇರಿ ತಂದೆ, ತಾಯಿ, ತಂಗಿಯ ಕೊಲೆ ಮಾಡಿದ್ದ ಆರೋಪಿ ಶ್ವೇತಾಳನ್ನು ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿದ್ದಾರೆ. ಕೃತ್ಯದ ಬಳಿಕ ಪ್ರಿಯಕರ ಕೆನತ್ ಮತ್ತು ಶ್ವೇತಾ ಬೇರೆ ಬೇರೆಯಾಗಿ ಪರಾರಿಯಾಗಿ ತಲಮರೆಸಿಕೊಂಡಿದ್ದರು. ತನಿಖೆ ಕೈಗೊಂಡು ಆರೋಪಿಗಳ ಜಾಡು ಹಿಡಿದ ಕೆಆರ್ ಪುರಂ ಠಾಣೆ ಪೊಲೀಸರು ಪಾಂಡಿಚೇರಿ ರೈಲ್ವೇ ನಿಲ್ದಾಣದಲ್ಲಿ ಶ್ವೇತಾಳನ್ನು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಕೆನತ್ ಗಾಗಿ ಹುಡುಕಾಟ ಮುಂದುವರೆದಿದೆ.
ಮೋಜಿನ ಜೀವನಕ್ಕಾಗಿ ಮಾಡಿದ 30 ಲಕ್ಷ ರೂಪಾಯಿ ಸಾಲದ ಬಗ್ಗೆ ಪ್ರಶ್ನಿಸಿದಕ್ಕೆ ಆಕ್ರೋಶಗೊಂಡ ಶ್ವೇತಾ ತನ್ನ ತಂದೆ ಸೋಮಸುಂದರ್(52), ತಾಯಿ ಮುತ್ತುಲಕ್ಷ್ಮಿ(48) ಮತ್ತು ತಂಗಿ ಸುಪ್ರಿಯಾ(19) ಅವರನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಳು.
ಹಣಕಾಸು ಸಂಬಂಧ ಸೀಗೇಹಳ್ಳಿ ಸಮೀಪದ ತಮ್ಮ ಅಪಾರ್ಟ್ಮೆಂಟ್ ಗೆ ಬಂದ ತಂದೆ, ತಾಯಿ ಮತ್ತು ತಂಗಿಯನ್ನು ಆರೋಪಿಗಳು ಸೋಮವಾರ ರಾತ್ರಿ ಕೊಲೆ ಮಾಡಿದ್ದಾರೆ. ಸೋಮ ಸುಂದರ್ ಮೂಲತಃ ತಮಿಳುನಾಡಿನವರಾಗಿದ್ದು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಳೆದ ಎರಡು ದಶಕಗಳಿಂದ ನೆಲ್ಲೂರಹಳ್ಳಿಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು.
ಹಿರಿಯ ಮಗಳು ಶ್ವೇತಾ ಮೋಜಿನ ಜೀವನದ ವ್ಯಾಮೋಹಕ್ಕೆ ಬಿದ್ದಿದ್ದಳು. ಮನೆ ತೊರೆದಿದ್ದ ಆಕೆ ಎರಡೂವರೆ ವರ್ಷಗಳಿಂದ ಸೀಗೆಹಳ್ಳಿ ಸಮೀಪದ ಅಪಾರ್ಟ್ಮೆಂಟ್ನಲ್ಲಿ ಪ್ರಿಯಕರ ಕೆನತ್ ಜೊತೆಗೆ ಲಿವಿಂಗ್ ಟುಗೆದರ್ ನಲ್ಲಿದ್ದಳು. ವಿವಿಧ ಬ್ಯಾಂಕುಗಳಲ್ಲಿ 30 ಲಕ್ಷ ರೂ. ಸಾಲ ಮಾಡಿದ್ದಳು. ಬ್ಯಾಂಕ್ ವ್ಯವಹಾರಗಳಿಗೆ ತನ್ನ ಮನೆ ವಿಳಾಸ ನೀಡಿದ್ದರಿಂದ ಆಕೆಯ ತಂದೆ ಮನೆಗೆ ಬ್ಯಾಂಕ್ ನೋಟಿಸ್ ಗಳು ಬರುತ್ತಿದ್ದವು. ಈ ಬಗ್ಗೆ ವಿಚಾರಿಸಲು ಆಕೆಯ ಮನೆಗೆ ಹೋಗಿದ್ದಾಗ ಪ್ರಿಯಕರ ಕೆನತ್ ಜತೆ ಸೇರಿ ಮೂವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

