ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌಂದರ್ಯ, ಪ್ರೀತಿ, ಆಕರ್ಷಣೆ ಹಾಗೂ ಐಷಾರಾಮಿ ಜೀವನದ ಕಾರಕ ಗ್ರಹವೆನಿಸಿರುವ ಶುಕ್ರನ ಚಲನೆ ಅತ್ಯಂತ ಪ್ರಮುಖವಾದದ್ದು. ಶುಕ್ರನ ರಾಶಿ ಅಥವಾ ನಕ್ಷತ್ರ ಪರಿವರ್ತನೆ ಎಲ್ಲಾ 12 ರಾಶಿಗಳ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಆದರೆ, ಶುಕ್ರ ಗ್ರಹವು ಹಿಮ್ಮುಖ ಚಲನೆ ಅಂದರೆ ವಕ್ರಿ ಸ್ಥಿತಿಗೆ ತಲುಪಿದಾಗ ಕೆಲವು ರಾಶಿಯವರ ಜೀವನದಲ್ಲಿ ಸವಾಲುಗಳು ಎದುರಾಗುವುದು ಸಹಜ.
ಇದೇ ಅಕ್ಟೋಬರ್ 3ರ ರಾತ್ರಿ 12:45ರಿಂದ ಶುಕ್ರ ಗ್ರಹ ತನ್ನ ವಕ್ರಿ ಸಂಚಾರವನ್ನು ಆರಂಭಿಸಲಿದೆ. ನವೆಂಬರ್ 14ರ ವರೆಗೆ ಅಂದರೆ ಬರೋಬ್ಬರಿ 42 ದಿನಗಳ ಕಾಲ ಶುಕ್ರನು ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಈ ಅವಧಿಯಲ್ಲಿ ಪ್ರಮುಖವಾಗಿ 6 ರಾಶಿಯವರು ಆರೋಗ್ಯ, ಕೆಲಸ, ಪ್ರೀತಿ ಹಾಗೂ ಮಾನಸಿಕ ನೆಮ್ಮದಿಯ ವಿಚಾರದಲ್ಲಿ ಅತ್ಯಂತ ಜಾಗರೂಕರಾಗಿರಬೇಕ ಅಗತ್ಯವಿದೆ. ಆ ಆರು ರಾಶಿಗಳ ವಿವರ ಇಲ್ಲಿದೆ:
1. ವೃಷಭ ರಾಶಿ
ಈ ಅವಧಿಯಲ್ಲಿ ವೃಷಭ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಣ್ಣಪುಟ್ಟ ದೈಹಿಕ ಸಮಸ್ಯೆ ಕಂಡುಬಂದರೂ ನಿರ್ಲಕ್ಷಿಸಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆಯಾಸ ಉಂಟಾಗಬಹುದು. ದಿನಚರಿ ಹಾಳಾಗದಂತೆ ನೋಡಿಕೊಳ್ಳಿ ಹಾಗೂ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಿ.
2. ಮಿಥುನ ರಾಶಿ
ಮಿಥುನ ರಾಶಿಯವರಿಗೆ ಪ್ರೇಮ ಜೀವನ ಹಾಗೂ ಮಕ್ಕಳ ವಿಚಾರದಲ್ಲಿ ಕೆಲವು ಏರಿಳಿತಗಳು ಎದುರಾಗಬಹುದು. ದಂಪತಿಗಳ ನಡುವೆ ಅಥವಾ ಪ್ರೇಮಿಗಳ ಮಧ್ಯೆ ತಪ್ಪು ತಿಳುವಳಿಕೆಗಳಿಂದ ಜಗಳವಾಗುವ ಸಾಧ್ಯತೆಯಿದೆ. ಯಾವುದೇ ವಿಷಯವನ್ನು ಭಾವುಕರಾಗಿ ನಿರ್ಧರಿಸದೆ, ಶಾಂತಿಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಒಳಿತು.
3. ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ 42 ದಿನಗಳ ಕಾಲ ಅದೃಷ್ಟದ ಬೆಂಬಲ ಕೊಂಚ ಕಡಿಮೆಯಾಗಲಿದೆ. ಕಠಿಣ ಪರಿಶ್ರಮ ಪಟ್ಟರೂ ನಿರೀಕ್ಷಿತ ಫಲಿತಾಂಶ ತಕ್ಷಣಕ್ಕೆ ಸಿಗದೇ ಇರಬಹುದು. ಮಹತ್ವದ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುವ ಸಂಭವವಿದ್ದು, ಧೈರ್ಯಗೆಡದೆ ತಾಳ್ಮೆಯಿಂದ ಪ್ರಯತ್ನ ಮುಂದುವರಿಸಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
4. ತುಲಾ ರಾಶಿ
ತುಲಾ ರಾಶಿಯವರಿಗೆ ಶುಕ್ರನ ವಕ್ರಿ ಸಂಚಾರದಿಂದಾಗಿ ಆರೋಗ್ಯ ಸಂಬಂಧಿ ಕಿರಿಕಿರಿಗಳು ಎದುರಾಗಬಹುದು. ನಿರಂತರ ಕೆಲಸದ ನಡುವೆ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡುವುದು ಅಗತ್ಯ. ಹೊರಗಿನ ಅಶುಚಿತ್ವದ ಆಹಾರ ಸೇವನೆಯನ್ನು ತಪ್ಪಿಸಿ ಹಾಗೂ ದಿನನಿತ್ಯದ ಶಿಸ್ತನ್ನು ಕಾಪಾಡಿಕೊಳ್ಳಿ.
5. ಮಕರ ರಾಶಿ
ಮಕರ ರಾಶಿಯವರು ಈ ಸಮಯದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ. ವ್ಯಾಪಾರ, ವ್ಯವಹಾರ ಹಾಗೂ ವೈಯಕ್ತಿಕ ಜೀವನದ ಮೇಲೆಯೂ ಇದರ ಪ್ರಭಾವ ಬೀರುವ ಲಕ್ಷಣಗಳಿವೆ. ಚಿಂತೆಗೆ ಒಳಗಾಗುವ ಬದಲು, ಸವಾಲುಗಳನ್ನು ಸಮಾಧಾನದಿಂದ ನಿಭಾಯಿಸಿ ಮುನ್ನಡೆಯುವುದು ಸೂಕ್ತ.
6. ಕುಂಭ ರಾಶಿ
ಕುಂಭ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗುವುದು ವಿಳಂಬವಾಗಬಹುದು. ಯೋಜಿತ ಕೆಲಸ ಕಾರ್ಯಗಳು ತಡೆಹಿಡಿಯಲ್ಪಡಬಹುದು ಅಥವಾ ಅಂದುಕೊಂಡಿದ್ದನ್ನು ಸಾಧಿಸಲು ಸಾಮಾನ್ಯಕ್ಕಿಂತ ಹೆಚ್ಚಿನ ಶ್ರಮ ವಹಿಸಬೇಕಾಗಿ ಬರಬಹುದು. ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿದರೆ ತೊಂದರೆಗಳಿಂದ ಪಾರಾಗಬಹುದು.

