ವಿಜಯಪುರ: ಹಾಲು ತರಲು ಹೋಗಿದ್ದ ಮಹಿಳೆಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು ಚಿನ್ನದ ಓಲೆ, ಸರ ದೋಚಿ ಪರಾರಿಯಾದ ಘಟನೆ ವಿಜಯಪುರದ ದಿವಟಗೇರಿ ಗಲ್ಲಿಯಲ್ಲಿ ನಡೆದಿದೆ.
ಡಿಸೆಂಬರ್ 26ರಂದು ಸಂಜೆ ಕಲಾವತಿ ಗಾಯಕವಾಡ್(45) ಹಾಲು ತರಲು ಅಂಗಡಿಗೆ ಹೋಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿ ಕಿವಿ ಕತ್ತರಿಸಿ ಕಿವಿಯೋಲೆ ಮತ್ತು ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದಾರೆ.
ಮನೆಯ ಸಮೀಪದಲ್ಲಿಯೇ ಘಟನೆ ನಡೆದಿದೆ. ಮಸುಕುಧಾರಿಗಳಾಗಿ ಬಂದಿದ್ದ ದುಷ್ಕರ್ಮಿಗಳು ಕಲಾವತಿ ಅವರ ಮಗನ ಸ್ನೇಹಿತರಂತೆ, ಪರಿಚಿತರಂತೆ ಮಾತನಾಡಿದ್ದಾರೆ. ನಂತರ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಚಿನ್ನದ ಸರ ಹಾಗೂ ಕಿವಿಯೋಲೆ ದೋಚಿ ಪರಾರಿಯಾಗಿದ್ದಾರೆ.
ಕಿವಿ ಕತ್ತರಿಸಿದ್ದರಿಂದ ಭಾರಿ ರಕ್ತಸ್ರಾವವಾಗಿದ್ದು, ಕಲಾವತಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮುಖಕ್ಕೆ ಗುದ್ದಿದ್ದರಿಂದ ಹಲ್ಲು ನೋವು ಉಂಟಾಗಿದೆ. ಕಿವಿಗೆ ಮೂರು ಹೊಲಿಗೆ ಹಾಕಲಾಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

