ರಾಯಚೂರು: ರಾಯಚೂರು ತಾಲೂಕಿನ ಅರಕೇರಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಪೊಲೀಸ್ ಕಾನ್ಸ್ಟೇಬಲ್ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದು ರೇಣುಕಾರಾಜ್(37) ಸಾವನ್ನಪ್ಪಿದ್ದಾರೆ. ದೇವದುರ್ಗ ಠಾಣೆಯಲ್ಲಿ ರೇಣುಕಾರಾಜ್ ಕಾರ್ಯನಿರ್ವಹಿಸುತ್ತಿದ್ದರು. ದೇವದುರ್ಗ ಸಿಪಿಐ ಕಾರು ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಜೂನ್ 23 ರಂದು ಮೊಹರಂ ಬಂದೋಬಸ್ತ್ ಗಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ವೇಳೆ ರಾತ್ರಿ 10.30 ರ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವಿನ ಜೊತೆಗೆ ಎಡಗೈ ಸೆಳೆತದಿಂದ ಕರ್ತವ್ಯದ ವೇಳೆ ಒದ್ದಾಟ ನಡೆಸಿದ್ದಾರೆ. ಕೂಡಲೇ ಸಿಪಿಐ ಜೀಪ್ ನಲ್ಲಿ ಆಸ್ಪತ್ರೆಗೆ ಅವರನ್ನು ಕರೆದೊಯ್ಯಲಾಗಿದೆ.
ಅರಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂಜೆಕ್ಷನ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಚೇರ್ ಮೇಲೆ ಕುಳಿತಲ್ಲೇ ಕುಸಿದು ಬಿದ್ದು ರೇಣುಕಾರಾಜ್ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ಘಟಕದಿಂದ ರೇಣುಕಾರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅವರು ಮೂಲತಃ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಆಮದಿಹಾಳ ನಿವಾಸಿಯಾಗಿದ್ದಾರೆ.

