ಯಾದಗಿರಿ : ಪಾಪಿ ಪತಿಯೋರ್ವ ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಶರಣಪ್ಪ ಎಂಬಾತ ಈ ಕೃತ್ಯ ಎಸಗಿದ್ದು, ತನ್ನ ಮೂವರ ಮಕ್ಕಳ ಪೈಕಿ ಇಬ್ಬರನ್ನು ಕೊಂದಿದ್ದಾನೆ. ಕೊಲೆಯಾದ ಮಕ್ಕಳನ್ನು ಭಾರ್ಗವ್ (5) ಹಾಗೂ ಸಾನ್ವಿ (3) ಎಂದು ಗುರುತಿಸಲಾಗಿದೆ. ಹಿರಿಯ ಮಗ ಹೇಮಂತ್ (8) ಕೊಲೆಗೂ ಶರಣಪ್ಪ ಯತ್ನಿಸಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಟ್ಟ ಪತಿ ತನ್ನ ಪುಟ್ಟ ಮಕ್ಕಳನ್ನು ಕೊಂದು ಎಸ್ಕೇಪ್ ಆಗಿದ್ದಾನೆ. ಏನೂ ಅರಿಯದ ಮುಗ್ದ ಕಂದಮ್ಮಗಳು ಜೀವ ಬಿಟ್ಟಿದೆ. ಮಕ್ಕಳನ್ನು ಕೊಲೆ ಮಾಡಿ ಆರೋಪಿ ಶರಣಪ್ಪ ಎಸ್ಕೇಪ್ ಆಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಯಾದಗಿರಿ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.