ಕಲಬುರಗಿ : ರಾಜ್ಯದಲ್ಲಿ ಅತ್ಯಂತ ಹೀನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಅತಿಥಿ ಶಿಕ್ಷಕ ಪೊಲೀಸರ ಅತಿಥಿಯಾಗಿದ್ದಾನೆ.ಮಾದನಹಿಪ್ಪರಗಾ ಠಾಣೆ ಪೊಲೀಸರು ಅತಿಥಿ ಶಿಕ್ಷಕ ಶಿವರಾಜ ಸಾಗಮಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ವಿದ್ಯಾರ್ಥಿನಿಯ ಪೋಷಕರಿಗೆ ನಾಲ್ವರು ಮಕ್ಕಳಿದ್ದು, ತಾಯಿ ಮೂವರು ಮಕ್ಕಳನ್ನು ಕರೆದುಕೊಂಡು ಮಾರ್ಚ್ 27 ರಂದು ತವರಿಗೆ ಹೋಗಿದ್ದರು. ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿನಿ ತಂದೆಯೊಂದಿಗೆ ಊರಿನಲ್ಲಿ ಇದ್ದಳು. ಮಾರ್ಚ್ 28 ರಂದು ತಂದೆ ಹೊಲಕ್ಕೆ ಹೋಗಿದ್ದು, ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದಿದ್ದಾಳೆ.
ಈ ವೇಳೆ ಮನೆಗೆ ಬಂದ ಶಿಕ್ಷಕ ಅತ್ಯಾಚಾರ ಎಸಗಿದ್ದು, ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಪಕ್ಕದ ಮನೆಯವರು ಬಂದು ನೋಡಿದಾಗ ವಿದ್ಯಾರ್ಥಿನಿ ಅಸ್ವಸ್ಥಳಾಗಿ ಬಿದ್ದಿರುವುದು ಕಂಡುಬಂದಿದೆ.
ಆಕೆಗೆ ತಂದೆಗೆ ಮಾಹಿತಿ ನೀಡಿದ್ದು, ನಂತರ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ತಿಳಿಸಿದ್ದಾಳೆ. ಮಾರ್ಚ್ 29ರಂದು ಬಾಲಕಿಯ ತಂದೆ ಠಾಣೆಗೆ ದೂರು ನೀಡಿದ್ದು, ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವರಾಜನನ್ನು ಬಂಧಿಸಿದ್ದಾರೆ.