ಬೆಂಗಳೂರು: ರಾಜ್ಯಾದ್ಯಂತ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತದಾರರ ಪಟ್ಟಿ ಕೂಡ ಪ್ರಕಟವಾಗುತ್ತಿದೆ. ಈ ನಡುವೆ ಹ್ಯಾಟ್ರಿಕ್ ಹೀರೋ ನಟ ಶಿವರಾಜುಕುಮಾರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ತಿದ್ದುಪಡಿ ಮಾಡುವಂತೆ ಕೋರಿ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜ್ ಅವರು, ಮಾಹಿತಿ ನೀಡಿದ್ದಾರೆ. ನಟ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ, ಬದಲಾಗಿ ಅವರ ಪಾಸ್‌ಪೋರ್ಟ್‌ನಲ್ಲಿರುವಂತೆ `ಪುಟ್ಟಸ್ವಾಮಿ ಶಿವರಾಜ್ ಕುಮಾರ್’ ಎಂದು ಮತದಾರರ ಪಟ್ಟಿಯಲ್ಲೂ ಹೆಸರು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅವರೇ ಸ್ವಯಂಪ್ರೇರಿತರಾಗಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಡಿಸಿ ಕಾಂತರಾಜ್ ಅವರು ಖುದ್ದು ನಟ ಶಿವರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿ, ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ನಟನ ಮನವಿಯ ಮೇರೆಗೆ ಚುನಾವಣಾಧಿಕಾರಿಗಳು ಈಗ ಫಾರಂ 8ರ ಅಡಿ ಅವರ ಹೆಸರನ್ನು ಅಧಿಕೃತವಾಗಿ ತಿದ್ದುಪಡಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇಡಿ ದಾಳಿ: ಹಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಅಕ್ರಮ ಹಣ ವರ್ಗಾವಣೆ ಹಾಗೂ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬದವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸಿದ ದಾಳಿ ಮುಕ್ತಾಯವಾಗಿದ್ದು, ಬರೋಬ್ಬರಿ 36 ಗಂಟೆಗಳ ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಅಧಿಕಾರಿಗಳು ಅಪಾರ ಪ್ರಮಾಣದ ಹಣ ಹಾಗೂ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಗೋಕಾಕ್‌ದ ಹಿಲ್ಸ್ ಗಾರ್ಡನ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಪತ್ತೆಯಾದ ಹಣವನ್ನು ಸೀಜ್ ಮಾಡಿ ಟ್ರಂಕ್‌ನಲ್ಲಿ ಬ್ಯಾಂಕ್‌ಗೆ ರವಾನಿಸಲಾಗಿದೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಹಾಗೂ ಕುಟುಂಬದವರ ಮನೆಗಳಲ್ಲಿ ದಾಳಿ ವೇಳೆ ಇಡಿ ಅಧಿಕಾರಿಗಳು ಸುಮಾರು 3 ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇಡಿ ದಾಳಿ ಬಳಿಕ ಪ್ರತಿಕ್ರಿಯೆ ನಿಡಿದ ಸಚಿವ ಸತೀಶ್ ಜಾರಕಿಹೊಳಿ, ಇಡಿ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿರುವುದು ನಮ್ಮದೇ ನಗದು ಹಣ. ದಾಳಿಯಲ್ಲಿ ಸಿಕ್ಕ 2 ಕೋಟಿ ಹಣ ನಮ್ಮದು. ಅದನ್ನು ವಾಪಸ್ ಪಡೆಯಲು ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಇದು ಇಡಿ ದಾಳಿಯಲ್ಲ, ಇದೊಂದು ತಪಾಸಣೆ. ಏನಾದರೂ ಅನುಮಾನಗಳಿದ್ದರೆ ನೋಟಿಸ್ ನೀಡಿ ಮಾಹಿತಿ ಕೇಳಬಹುದಿತ್ತು. ಅಧಿಕಾರಿಗಳು ಕೇಳಿದ ಮಾಹಿತಿಗೆ ನಾವು ಉತ್ತರ ನೀಡಿದ್ದೇವೆ. ಅಧಿಕಾರಿಗಳ ವಿಚಾರಣೆ ಹಾಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದರು.
ವಿದೇಶದಲ್ಲಿ ಹೂಡಿಕೆ ಮಾಡುತ್ತಿರುವ ವಿಚಾರದ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೋಟಿಸ್‌ನಲ್ಲಿ ಫೆಮಾ ಕಾಯ್ದೆ ಉಲ್ಲೇಖಿಸಲಾಗಿದೆ. ಆದರೆ ಹೂಡಿಕೆ ವಿಚಾರ ಇನ್ನೂ ಕಾನೂನು ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ಇಡಿ. ಅಧಿಕಾರಿಗಳು ಪ್ರತ್ಯೇಕ ತಂಡಗಳಲ್ಲಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಸಚಿವ ಸತೀಶ್ ಜಾರಕಿಹೊಳಿ ನಿವಾಸ, ಕ್ರೆಸೆಂಟ್ ರಸ್ತೆಯ ಮನೆ, ಆಪ್ತರ ಮನೆಗಳು, ಚಿಕ್ಕೋಡಿಯಲ್ಲಿರುವ ಸಂಸದೆ ಪ್ರಿಯಾಂಕ ಜಾರಕಿಹೊಳಿ ಮನೆ, ಪುತ್ರ ರಾಹುಲ್ ಮನೆ, ಗೋಕಾಕ್ ನಲ್ಲಿರುವ ಮನೆ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಸತತ 36 ಗಂಟೆಗಳ ಕಾಲ ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

