ಬೆಂಗಳೂರು: ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಕನ್ನಡಿಗರನ್ನು ಅವಹೇಳನ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಟ ಶಿವರಾಜ್ ಕೆಆರ್ ಪೇಟೆ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಿದೆ ಸೋನು ನಿಗಮ್ ಕುರಿತಾಗಿ ಶಿವರಾಜ್ ಕೆಆರ್ ಪೇಟೆ ಅವರ ಪ್ರತಿಕ್ರಿಯೆ…
“ಡಿಯರ್ ಸೋನು..
ನೀವು ಹಾಡಿದ ಕನ್ನಡ ಹಾಡನ್ನು ಮೊದಲ ಬಾರಿಗೆ ಕೇಳಿ ಗುನುಗಿದ್ದು ಯಾವಾಗಲೋ ಗೊತ್ತಿಲ್ಲ. ಆದರೆ ಆಗಿನಿಂದಲೂ ನಾನು ನಿಮ್ಮ ಅಭಿಮಾನಿ. ಹಾಡು ಹೇಗೆ ಇರಲಿ, ಸೋನು ಹಾಡಿರೋದು ಎಂದ ಕೂಡಲೇ ಅದು ತುಂಬಾ ಒಳ್ಳೇ ಹಾಡೇ ಆಗಿರುತ್ತೆ ಎಂದು ನಂಬಿದ್ದವನು. ಇದೇ ರೀತಿ ಕನ್ನಡ ಚಿತ್ರರಂಗದ ಬಹುಪಾಲು ಜನರು ನಂಬಿದ್ದರು, ಅದು ನಿಜ ಕೂಡ. ಆ ನಂಬಿಕೆ ಇಂದಲೇ ಸಿನಿಮಾದಲ್ಲಿ ಬರುವ ಬಹುಮುಖ್ಯ ಹಾಡನ್ನ ಸೋನು ಕಂಠದಲ್ಲೇ ಹಾಡಿಸಬೇಕೆಂದು ಚಿತ್ರತಂಡಗಳು ಆಸೆ ಪಡುತ್ತಿದ್ದರು. ನಾನು ಅಭಿನಯಿಸಿದ ‘ನಾನು ಮತ್ತು ಗುಂಡ’ ಸಿನಿಮಾದ ಟೈಟಲ್ ಸಾಂಗನ್ನು ನಿಮ್ಮಿಂದಲೇ ಹಾಡಿಸಬೇಕು ಎಂದು ಹಠ ತೊಟ್ಟು ಹಾಡಿಸಿದೆವು.
ಆದರೆ ಈ ಕ್ಷಣಕ್ಕೆ ಸತ್ಯವೊಂದು ಅರ್ಥವಾಗುತ್ತಿದೆ. ನೀವು ಹಾಡಿದ ಕನ್ನಡ ಹಾಡುಗಳು ನಮಗೆ ಉಸಿರು, ಆದರೆ ನಿಮಗೆ ಅವು ಬರೀ ರಾಗಬದ್ಧವಾಗಿ ಹೊರಡುವ ಶಬ್ಧಗಳಷ್ಟೆ. ನಿಮ್ಮೊಳಗೆ ಆ ಶಬ್ದಗಳ ಬಗ್ಗೆ ಅನುರಾಗವು ಇಲ್ಲ, ಅಭಿಮಾನವು ಇಲ್ಲ ಎಂಬ ಕಹಿ ಸತ್ಯ ಅರ್ಥವಾಗುತ್ತಿದೆ.
ಕನ್ನಡಿಗರನ್ನ ಕೆಣಕುವವರಿಗೇನು ಬರವಿಲ್ಲ. ಅವರಿಗೆಲ್ಲಾ ಒಳ್ಳೆದಾಗಲಿ. ಆದರೆ ನೀವು ನೋಯಿಸಿದಿರಿ. ನಿಮ್ಮನ್ನು ಪ್ರೀತಿಸಿದ ಪ್ರತಿ ಕನ್ನಡಿಗನನ್ನು ನೋಯಿಸಿದಿರಿ.
ನೀವು ಹಾಡಿದ ಹಾಡುಗಳನ್ನ ಮತ್ತೆ ಕೇಳುವುದಿಲ್ಲ ಎಂಬ ಸುಳ್ಳನ್ನು ಹೇಳಲಾರೆ. ಆದರೆ ಇನ್ನು ಮುಂದೆ ನಿಮ್ಮ ಧ್ವನಿ ಕೇಳಿದಾಗಲೆಲ್ಲಾ, ಕನ್ನಡಿಗರನ್ನ ನೀವು ನೋಡಿದ ರೀತಿ, ಅವಮಾನಿಸಿದ ರೀತಿ ತಲೆಯಲ್ಲಿ ಉಳಿಯಲಿದೆ.
ಮನವಿ: ಇಂತಹ ಪರಪುಟ್ಟರನ್ನ ಬೆಳೆಸಿ ನಮಗೆ ನಾವೇ ಎರಡನೇ ದರ್ಜೆಯವ್ರು ಅನ್ನಿಸಿಕೊಳ್ಳೋ ಬದಲು, ನಮ್ಮವರೇ, ಅರ್ಥಗರ್ಭಿತವಾಗಿ, ಅನುಭವಿಸಿ ಹಾಡುವ ಕನ್ನಡಿಗರನ್ನ ಪ್ರೀತಿಸೋಣ.” ಎಂದು ತಿಳಿಸಿದ್ದಾರೆ.