ಶಿವಮೊಗ್ಗ: ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಭಾವಿ ಕೊರೆಸಲು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎಸ್. ಪರಮೇಶ್ವರಪ್ಪ ಅವರಿಗೆ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಹೊಸಗುಂದ ವಾಸಿ ಹೆಚ್.ಎಸ್.ಜನಾರ್ಧನರವರಿಂದ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಭಾವಿ ಕೊರೆಸಲು ಲಂಚ ಪಡೆಯುತ್ತಿದ್ದಾಗ ಪರಮೇಶ್ವರಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.
ಪ್ರಕರಣ ಸಂಬಂಧ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು ಅಪರಾಧಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 40000/- ರೂ. ದಂಡ ವಿಧಿಸಿ ಅದೇಶ ಹೊರಡಿಸಿದೆ.
ಜುಲೈ 2017ರಲ್ಲಿ ಆಪಾದಿತ ಅಧಿಕಾರಿ ತಮ್ಮ ಕಚೇರಿಯಲ್ಲಿ ರೂ. 10,000/- ರೂ. ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿದ್ದರು. ಈ ಪ್ರಕರಣವನ್ನು ತನಿಖಾಧಿಕಾರಿ ಪೊಲೀಸ್ ಉಪಾಧೀಕ್ಷಕ ಎ. ಚಂದ್ರಪ್ಪ ತನಿಖೆ ಕೈಗೊಂಡು ಆಪಾದಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಏ.02,2026 ರಂದು ವಿಚಾರಣೆ ನಡೆಸಿ ಆರೋಪ ದೃಢಪಟ್ಟಿರುವುದು ಕಂಡುಬಂದಿದ್ದು, ಅಪರಾಧಿಗೆ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ರೂ. 40,000/- ಗಳ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರ್ ರಾಜ್ ವಾದ ಮಂಡಿಸಿದ್ದರು.

