ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಹಸು ಹುಡುಕಲು ಹೋಗಿದ್ದ ಮೂವರು ಅರಣ್ಯ ಇಲಕಹೆ ಸಿಬ್ಬಂದಿಗಳ ಗುಂಡೇಟಿಗೆ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ.
ಕೊಳ್ಳೆಗಾಲ ಎಸಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, 7 ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಚುರುಕುಗೊಳ್ಳಲಿದೆ.
ಏನಿದು ಪ್ರಕರಣ:
ಹಸು ಹುಡುಕಲೆಂದು ಶಾಗ್ಯ ಅರಣ್ಯ ವ್ಯಾಪ್ತಿಗೆ ಹೋಗಿದ್ದವರನ್ನು ಪ್ರಾಣಿ ಬೇಟೆಗೆ ಬಂದಿದ್ದಾರೆಂದು ಭಾವಿಸಿ ಅರಣಾಧ್ಯಿಕಾರಿಗಳು ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದರು. ಓರ್ವ ಬಚಾವಾಗಿ ತಪ್ಪಿಸಿಕೊಂಡು ಬಂದಿದ್ದಾರೆ. ಮೃತರನ್ನು ಕುಮಾರ್, ಪೀಟರ್, ಅಂಥೋಣಿ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತ ಆಥೋಣಿಸಾಮಿ ಪತ್ನಿ ಲೂರ್ದಾಮೇರಿ ದೂರಿನ ಆಧಾರದಲ್ಲಿ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ವಲಯ ಐಜಿ ಬೋರಲಿಂಗೇಗೌಡ, ಚಾಮರಾಜನಗರ ಎಸ್ಪಿ ಮುತ್ತುತಾಜು ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಹನೂರು ವಿಭಾಗ ಎಂದು ಆರೋಪಿಗಳನ್ನಾಗಿಸಿ ಕೇಸ್ ದಾಖಲಿಸಲಾಗಿದೆ. ನಿರ್ದಿಷ್ಟ ಹೆಸರು ನಮೂದಿಸದೇ ಅರಣ್ಯ ಅಧಿಕಾರಿಗಳು ಎಂದು ಎಫ್ಐಆರ್ನಲ್ಲಿ ನಮೂದಿಸಲಾಗಿದೆ. ಬಿಎನ್ ಎಸ್ 103(1) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
ಅಂಥೋಣಿಸ್ವಾಮಿ ಪತ್ನಿ ದೂರಿನಲ್ಲಿ ನಾವು ಹಸು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೆವು. ಆ.14 ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು. ಅವುಗಳು ವಾಪಸ್ ಬಂದಿರಲಿಲ್ಲ.ಹಸುಗಳನ್ನು ಹುಡುಕಿಕೊಂಡು ಬರಲು ನಿನ್ನೆ ಆಗಸ್ಟ್ 14ರ ಸಂಜೆ ನನ್ನ ಪತಿ ಆಥೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್, ದೊಡ್ಡಪ್ಪನ ಮಗ ಜೋಸೆಫ್ ತೆರಳಿದ್ದರು. ಬೆಳಿಗ್ಗೆಯಾದರೂ ಅವರು ಮನೆಗೆ ಬಂದಿರಲಿಲ್ಲ. ಬೆಳಿಗ್ಗೆ ಜೋಸೆಫ್ ಕರೆ ಮಾಡಿ ಘಟನೆ ವಿವರಿಸಿದ. ಮರಿಯಮಂಗಲ ಗ್ರಾಮದಿಂದ 4 ಕಿಮೀ ಕಾಡಿನಲ್ಲಿ ನಾವು ವಿಶ್ರಾಂತಿ ಮಾಡುತ್ತಾ ಮಲಗಿದ್ದೆವು. ಬೆಳಿಗಿನ ಜಾವ ಸುಮಾರು 3 ರಿಂದ 5 ಗಂಟೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ರು. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟರು. ನಾನು ತಪ್ಪಿಸಿಕೊಂಡು ಬಂದೆ ಎಂದು ಜೋಸೆಫ್ ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಈ ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದ್ದು, ಏಳು ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

