ಬೆಂಗಳೂರು: ನವೆಂಬರ್ ನಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದ್ದು, ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ತೀವ್ರ ಚಟುವಟಿಕೆಗಳು ಶುರುವಾಗಿವೆ.
ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಸಂಪುಟದಿಂದ ಹೊರ ಬೀಳುವ ಭೀತಿಯಿಂದ ಕೆಲವು ಪ್ರಭಾವಿ ಸಚಿವರು ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಚಿವ ಸ್ಥಾನ ಕೈ ತಪ್ಪುವ ಆತಂಕದಲ್ಲಿರುವ ಕೆಲವರು ಪ್ರತ್ಯೇಕ ಸಭೆ ನಡೆಸಿ ತಂತ್ರಗಾರಿಕೆ ರೂಪಿಸಿದ್ದಾರೆ. ಇನ್ನು ಕೆಲವರು, ಸಚಿವ ಹೊಸಬರಿಗೆ ಅವಕಾಶ ನೀಡಲು ಸಚಿವ ಸ್ಥಾನ ಕೈಬಿಡಲು ಸಿದ್ಧವೆಂದು ಹೇಳಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು, ರಾಜಕೀಯವಾಗಿ ಪಕ್ಷ ಬಲಪಡಿಸಲು ಎಲ್ಲರಿಗೂ ಅವಕಾಶ ಕೊಡಬೇಕು. ನಾಲ್ಕೈದು ಬಾರಿ ಶಾಸಕರಾದವರಿಗೆ ಇನ್ನು ಸಚಿವ ಸ್ಥಾನ ಸಿಕ್ಕಿಲ್ಲ. ಅಂತವರಿಗೂ ಅವಕಾಶ ನೀಡಬೇಕು. ಮುಂದಿನ ಸಚಿವ ಸಂಪುಟ ಪುನರ್ ರಚನೆಯ ವೇಳೆ ನನ್ನ ಮಗಳಿಗೆ ಸಚಿವ ಸ್ಥಾನ ಸಿಕ್ಕರೆ ಬಹಳ ಸಂತೋಷ. ನಾನು ಸಚಿವ ಸ್ಥಾನವನ್ನು ಧಾರಾಳವಾಗಿ ಬಿಟ್ಟು ಕೊಡುತ್ತೇನೆ. ನನಗೇನು ಅಭ್ಯಂತರ ಇಲ್ಲವೆಂದು ಹೇಳಿದ್ದಾರೆ.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರು, ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತೊರೆಯುತ್ತೇನೆ ಎಂದು ಹೇಳಿದ್ದಾರೆ. ಸಂಪುಟ ಪುನರ್ ರಚನೆ ವಿಚಾರ ಹೈಕಮಾಂಡ್ ಮತ್ತು ಮುಖ್ಯಮಂತ್ರಿಯವರಿಗೆ ಬಿಟ್ಟಿದೆ. ಅವರೇನಾದರೂ ಸಚಿವ ಸ್ಥಾನ ಬಿಟ್ಟುಕೊಡಲು ಸೂಚಿಸಿದರೆ ಯಾರೇ ಆದರೂ ಬಿಟ್ಟು ಕೊಡಲೇಬೇಕಾಗುತ್ತದೆ. ನಮ್ಮಂತೆಯೇ ಪಕ್ಷದ ಇನ್ನೂ ಅನೇಕ ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷ ಸೂಚನೆ ನೀಡಿದಲ್ಲಿ ಸಚಿವ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.