ಬೆಂಗಳೂರು : ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ (88) ಅವರು ನಿಧನರಾಗಿದ್ದಾರೆ. ಕಳೆದ ಕೆಲಕಾಲದಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕಳೆದ 1 ತಿಂಗಳಿನಿಂದ ಅನಾರೋಗ್ಯಕ್ಕೆ ಹಾಗೂ ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ರಾಮಚಂದ್ರೇಗೌಡ ರಾಜಾಜಿನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 1953ರಲ್ಲಿ ಆರ್‌ಎಸ್‌ಎಸ್ ಸೇರುವ ಮೂಲಕ ಸಾರ್ವಜನಿಕ ಜೀವನ ಆರಂಭಿಸಿದ ಅವರು, 1970ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದರು.
ಪಕ್ಷದ ಸಂಘಟನೆ: ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಪ್ರಮುಖ ನಾಯಕರಲ್ಲಿ ಇವರೊಬ್ಬರು. ಅಂದಿನ ಭಾರತೀಯ ಜನಸಂಘದ ವತಿಯಿಂದ ಬೆಂಗಳೂರು ನಗರ ನಿಗಮಕ್ಕೆ (ಬಿಸಿಸಿ) ಆಯ್ಕೆಯಾದ ಮೊದಲ ಕಾರ್ಪೊರೇಟರ್ ಎಂಬ ಹೆಗ್ಗಳಿಕೆ ಇವರದ್ದು.
ಪ್ರಭಾವಿ ನಾಯಕ: ಇವರು ಸತತ ಐದು ಬಾರಿ ವಿಧಾನ ಪರಿಷತ್ (MLC) ಸದಸ್ಯರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತಿ: ಸುಮಾರು ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ರಾಮಚಂದ್ರೇಗೌಡರು, 2018ರಲ್ಲಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದರು. ರಾಮಚಂದ್ರೇಗೌಡ ಅವರ ನಿಧನಕ್ಕೆ ರಾಜ್ಯದ ಅನೇಕ ಗಣ್ಯರು ಹಾಗೂ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.
ಅಂತಿಮ ದರ್ಶನಕ್ಕೆ ವ್ಯವಸ್ಥೆ
ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ರಾಮಚಂದ್ರೇಗೌಡ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4.00 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಂತಾಪ
ಪಕ್ಷದ ಹಿರಿಯ ನಾಯಕರು, ಮಾರ್ಗದರ್ಶಕರು, ಮಾಜಿ ಸಚಿವರು, ಸುಮಾರು ಮೂರು ದಶಕಗಳ ಕಾಲ ಬೆಂಗಳೂರು ಪದವೀಧರರ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಿ ಆದರ್ಶಪ್ರಾಯ ಶಾಸಕರಾಗಿದ್ದ ಧೀಮಂತ ನೇತಾರ ಶ್ರೀ ರಾಮಚಂದ್ರ ಗೌಡರು ವಿಧಿವಶರಾದ ಸುದ್ದಿ ಅತೀವ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ. ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿ, ಜನಸಂಘದ ದಿನಗಳಿಂದಲೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ದುಡಿದ ಶ್ರೀ ರಾಮಚಂದ್ರ ಗೌಡರ ನಿಧನದಿಂದ ಪಕ್ಷ ತನ್ನ ಹಿರಿಯ ನಾಯಕನನ್ನು ಕಳೆದುಕೊಂಡಿದ್ದು ಭರಿಸಲಾಗದ ನಷ್ಟವಾಗಿದೆ. ಬೆಂಗಳೂರು ಪಾಲಿಕೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಜನಸಾಮಾನ್ಯರ ಧ್ವನಿಯಾಗಿ ಅವರು ಸಲ್ಲಿಸಿದ ಸುದೀರ್ಘ ಸೇವೆ ಆದರ್ಶಪ್ರಾಯವಾದದ್ದು. ಜೊತೆಗೆ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬೆಳೆಸುವಲ್ಲಿ ಅವರು ವಹಿಸಿದ ಮಹತ್ತರ ಪಾತ್ರ ಮತ್ತು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೂಜ್ಯ ತಂದೆ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆಪ್ತ ಒಡನಾಡಿಯಾಗಿದ್ದ ಅವರನ್ನು ಹತ್ತಿರದಿಂದಲೂ ನಾನು ಕಂಡಿದ್ದೇನೆ. ಅವರ ಆಡಳಿತಾತ್ಮಕ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಪ್ರೇರಣಾದಾಯಿ, ಅವರ ಆತ್ಮೀಯತೆ, ಮಾರ್ಗದರ್ಶನಗಳು ಅವಿಸ್ಮರಣೀಯ. ಒಬ್ಬ ಸಹೃದಯಿ ಮತ್ತು ಅಜಾತಶತ್ರು ನಾಯಕರಾಗಿದ್ದ ಅವರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ಕೂಡ ನನಗೆ ಅತ್ಯಂತ ನೋವನ್ನುಂಟು ಮಾಡಿದೆ. ಹಿರಿಯರಾದ ಶ್ರೀ ರಾಮಚಂದ್ರ ಗೌಡರ ನಿಧನದಿಂದ ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ಕೊಂಡಿಯೊಂದು ಕಳಚಿದಂತಾಗಿದೆ. ದೇವರು ಆ ಹಿರಿಯ ಚೇತನಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಪುತ್ರ ಶ್ರೀ ಸಪ್ತಗಿರಿ ಗೌಡ ಹಾಗೂ ಅವರ ಸಮಸ್ತ ಕುಟುಂಬ ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹಿರಿಯರ ಅಗಲಿಕೆಯದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ,

