ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಬುಧವಾರ ಪ್ರಕಟಿಸಿದೆ.
ವಿವಿಧ ಕೋರ್ಸ್ ಗಳ ಒಟ್ಟು 1,41,872 ಸೀಟುಗಳ ಪೈಕಿ 1,22,512 ಸೀಟುಗಳು ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿದ್ದು, 19,374 ಸೀಟು ಬಾಕಿ ಉಳಿದಿವೆ.
ಒಟ್ಟು 91,724 ಎಂಜಿನಿಯರಿಂಗ್ ಸೀಟುಗಳಲ್ಲಿ 90,748 ಸೀಟು ಹಂಚಿಕೆಯಾಗಿದ್ದು, ಕೇವಲ 976 ಸೀಟು ಮಾತ್ರ ಉಳಿದಿವೆ.
ಪಶು ವೈದ್ಯಕೀಯ ಕೋರ್ಸ್ ನಲ್ಲಿ ಎಲ್ಲ 361 ಸೀಟೂ ಹಂಚಿಕೆಯಾಗಿವೆ.
ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಫಾರ್ಮಸಿ ಕೋರ್ಸ್ ಗಳನ್ನು ಹೊರತುಪಡಿಸಿ ಇತರ ಕೋರ್ಸ್ ಗಳ ಸೀಟು ಹಂಚಿಕೆ ಮಾಡಲಾಗಿದೆ.
ಸೀಟು ಸಿಕ್ಕಿರುವ ಅಭ್ಯರ್ಥಿಗಳಿಗೆ ಚಾಯ್ಸ್ ಗಳ ಆಯ್ಕೆ, ಶುಲ್ಕ ಪಾವತಿ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸಂಬಂಧ ವೇಳಾಪಟ್ಟಿ ಪ್ರಕಟಿಸಿದ್ದು, ಜುಲೈ 24ರೊಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಚಾಯ್ಸ್ ದಾಖಲಿಗೂ ಒಂದೊಂದು ಕೋರ್ಸ್ ಗೆ ಒಂದೊಂದು ದಿನಾಂಕಗಳನ್ನು ನೀಡಿದ್ದು, ಆ ಪ್ರಕಾರ ಮಾಡಬೇಕು. ಎಂಜಿನಿಯರಿಂಗ್ ಪ್ರವೇಶ ಬಯಸುವ ಅಭ್ಯರ್ಥಿಗಳು ಜು.16ರಿಂದ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಕೋರ್ಸ್ ಅಭ್ಯರ್ಥಿಗಳು ಜು.17ರಿಂದ ಚಾಯ್ಸ್ ದಾಖಲಿಸಬಹುದು. ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ ಮತ್ತು ಎಹೆಚ್ಎಸ್ ಕೋರ್ಸ್ ಓದುವವರು ಜು.18 ಹಾಗೂ ಬಿಎಸ್ ಸಿ ನರ್ಸಿಂಗ್ ಅಭ್ಯರ್ಥಿಗಳು ಜು.19ರಿಂದ ಚಾಯ್ಸ್ ದಾಖಲಿಸಬಹುದು.
ಅರ್ಹರ ಪಟ್ಟಿ ಬರುವುದು ಕ್ರೀಡಾ ಇಲಾಖೆಯಿಂದ ತಡ ಆಗಿರುವ ಕಾರಣ ಕ್ರೀಡಾ ಕೋಟಾದ ಸೀಟುಗಳನ್ನು ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಎರಡನೇ ಸುತ್ತಿನಲ್ಲಿ ಆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು.
ಇತರ ವಿಶೇಷ ಕ್ಯಾಟಗರಿಗಳ ಸೀಟು ಹಂಚಿಕೆ ಮಾಡಿದ್ದು ಉಳಿಕೆ ಸೀಟುಗಳನ್ನು ಅದೇ ಸುತ್ತಿನಲ್ಲಿ ಇತರರಿಗೆ ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

