ಆನ್‌ಲೈನ್ ವಂಚನೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಯುವತಿಯೊಬ್ಬಳು ತನ್ನ ಸಮಯಪ್ರಜ್ಞೆಯಿಂದ ವಂಚಕನೊಬ್ಬನಿಗೆ ದಿಕ್ಕು ತಪ್ಪಿಸಿ, ಅವನನ್ನು ಖಾಲಿ ಕೈಯಿಂದ ಕಳುಹಿಸಿದ ಘಟನೆ ಬೆಳಕಿಗೆ ಬಂದಿದೆ. ಈ ರೋಚಕ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ವಿಡಿಯೊದಲ್ಲಿ ಕಾಣುವಂತೆ, ವ್ಯಕ್ತಿಯೊಬ್ಬ ಯುವತಿಗೆ ಕರೆ ಮಾಡಿ ಆಕೆಯ ಖಾತೆಗೆ ತನ್ನ ತಂದೆ 12 ಸಾವಿರ ರೂಪಾಯಿ ಕಳುಹಿಸಬೇಕೆಂದು ತಿಳಿಸಿದ್ದಾರೆಂದು ಹೇಳುತ್ತಾನೆ. ಗೊಂದಲಕ್ಕೊಳಗಾದ ಯುವತಿ ಅದಕ್ಕೆ ಸಮ್ಮತಿಸುತ್ತಾಳೆ. ಆದರೆ, ವಂಚಕ ತನ್ನ ಕುತಂತ್ರ ಹೆಣೆಯಲು ಶುರುಮಾಡುತ್ತಾನೆ.
ಮೊದಲಿಗೆ ಆತ 10 ರೂಪಾಯಿ ಕಳುಹಿಸುತ್ತಾನೆ, ನಂತರ 10 ಸಾವಿರ ರೂಪಾಯಿ ವರ್ಗಾಯಿಸುತ್ತಾನೆ. ಯುವತಿಯ ಪ್ರತಿಕ್ರಿಯೆ ಹೇಗಿದೆ ಎಂದು ಪರೀಕ್ಷಿಸಲು ಸಂದೇಶವನ್ನೂ ಕಳುಹಿಸುತ್ತಾನೆ. ಆಕೆ ಯಾವುದೇ ಅನುಮಾನ ವ್ಯಕ್ತಪಡಿಸದಿದ್ದಾಗ, ಆತ ದಿಢೀರನೆ 20 ಸಾವಿರ ರೂಪಾಯಿ ಕಳುಹಿಸಿ, ಅದು ಆಕಸ್ಮಿಕವಾಗಿ ಆಗಿಹೋಯಿತು ಎಂದು ನಂಬಿಸುತ್ತಾನೆ. ತಕ್ಷಣವೇ ಆತ ಕರೆ ಮಾಡಿ, ಕಳುಹಿಸಿದ 20 ಸಾವಿರದಲ್ಲಿ 18 ಸಾವಿರ ರೂಪಾಯಿಗಳನ್ನು ಫೋನ್‌ಪೇ ಮೂಲಕ ತನ್ನ ಖಾತೆಗೆ ಹಿಂದಿರುಗಿಸುವಂತೆ ಒತ್ತಾಯಿಸುತ್ತಾನೆ.
ಆದರೆ, ಆ ಯುವತಿ ಅಷ್ಟು ಸುಲಭವಾಗಿ ಮೋಸ ಹೋಗುವವರಲ್ಲಿರಲಿಲ್ಲ. ಆತ ಕಳುಹಿಸಿದ್ದ ಸಂದೇಶದಲ್ಲಿನ 20 ಸಾವಿರದ ಮೊತ್ತವನ್ನು ಚಾಣಾಕ್ಷತನದಿಂದ 18 ಸಾವಿರಕ್ಕೆ ಬದಲಾಯಿಸಿ, ಅದೇ ಸಂದೇಶವನ್ನು ಆ ವಂಚಕನಿಗೆ ವಾಪಸ್ ಕಳುಹಿಸುತ್ತಾಳೆ. ತನ್ನ ಕುತಂತ್ರ ಬಯಲಾಯಿತೆಂದು ಅರಿತ ವಂಚಕ ಕೋಪಗೊಂಡು ಫೋನ್ ಕಟ್ ಮಾಡುತ್ತಾನೆ.
ನಂತರ ಯುವತಿ ನಡೆದ ಸಂಪೂರ್ಣ ಘಟನೆಯನ್ನು ವಿವರಿಸುತ್ತಾಳೆ. ಈ ಎಲ್ಲಾ ದೃಶ್ಯಗಳನ್ನು ಆಕೆಯ ತಾಯಿ ವಿಡಿಯೊ ಮಾಡಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಅದು ವೈರಲ್ ಆಗಿದೆ.
ಯುವತಿಯ ಜಾಣ್ಮೆಗೆ ಸಾರ್ವಜನಿಕರ ಮೆಚ್ಚುಗೆ
ಸಾಮಾಜಿಕ ಮಾಧ್ಯಮ ಬಳಕೆದಾರರು ಯುವತಿಯ ಸಮಯಪ್ರಜ್ಞೆ ಮತ್ತು ವಂಚಕನಿಗೆ ನೀಡಿದ ತಿರುಗೇಟನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರ “ಅವಳು ಅವನಿಗೆ ಅವನದೇ ಅಸ್ತ್ರದಿಂದ ತಿರುಗೇಟು ನೀಡಿದ್ದಾಳೆ” ಎಂದು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ವಂಚಕನನ್ನು ಆಕೆ ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ” ಎಂದು ಬರೆದಿದ್ದಾರೆ. ಮತ್ತೊಬ್ಬರು “ಚೆನ್ನಾಗಿ ಮಾಡಿದೆ! ಆಕೆಯ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.
Kalesh prevented by girl while talking to Scammer pic.twitter.com/d8sNRwjASy
— Ghar Ke Kalesh (@gharkekalesh) April 13, 2025