ನವದೆಹಲಿ: ಮೇಕೆದಾಟು ಯೋಜನೆಗೆಕರ್ನಾಟಕದ ಸಿದ್ಧತೆಗೆ ಅಡ್ಡಗಾಲು ಹಾಕಿದ್ದ ತಮಿಳುನಾಡಿಗೆ ಮತ್ತೆ ಹಿನ್ನಡೆಯಾಗಿದೆ. ಮೇಕೆದಾಟು ವಿಚಾರವಾಗಿ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಬಗ್ಗೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಕರ್ನಾಟಕದ ಜನತೆಗೆ ಸಿಕ್ಕ ಜಯ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರತಿಯು ತಮಗೆ ದೊರೆತಿದ್ದು, ಮೂವರು ನ್ಯಾಯಾಧೀಶರ ಪೀಠವು ಈ ಅರ್ಜಿಯನ್ನು ಪರಿಶೀಲಿಸಿ ತಿರಸ್ಕರಿಸಿದೆ ಎಂದು ತಿಳಿಸಿದರು.
ಈ ತೀರ್ಪು ಕರ್ನಾಟಕದ ಪಾಲಿಗೆ ಶುಭಸುದ್ದಿಯಾಗಿದ್ದು, ರಾಜ್ಯದ ಪರವಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು. ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಕರ್ನಾಟಕದ ಪರವಾಗಿಯೇ ಇತ್ತು. ಇದೀಗ ತಮಿಳುನಾಡಿನ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವುದರಿಂದ, ಮೇಕೆದಾಟು ಯೋಜನೆಯನ್ನು ಮುಂದುವರಿಸಲು ಕರ್ನಾಟಕಕ್ಕೆ ಹೆಚ್ಚಿನ ಅನುಕೂಲವಾಗಿದೆ. ನಾವು ಈಗಾಗಲೇ ಹೊಸ ಡಿಪಿಆರ್ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಹೇಳಿದರು.

