ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾಗಿರುವ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ವೇಳೆ ಮಹತ್ವದ ತರುಣವೊಂದು ಎದುರಾಗಿದೆ. ವಿನಾಯಕ ದಾಮೋದರ ಸಾವರ್ಕರ್ ಅವರು ಸಾವರ್ಕರಾಂಚೆ ವಿಜ್ಞಾನನಿಷ್ಠ ನಿಬಂಧ (ಸಾವರ್ಕರ್ ಅವರ ವಿಜ್ಞಾನ ಆಧಾರಿತ ಪ್ರಬಂಧಗಳು) ಎಂಬ ಗ್ರಂಥವನ್ನು ಸ್ವತಃ ರಚಿಸಿದ್ದು, ಅದರಲ್ಲಿ ದೇವರ ಅಸ್ತಿತ್ವ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಕಟುವಾಗಿ ಪ್ರಶ್ನಿಸಿದ್ದರು ಎಂಬುದನ್ನು ಅವರ ಸಹೋದರನ ಮೊಮ್ಮಗ ಸತ್ಯಕಿ ಸಾವರ್ಕರ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ.ಪುಣೆಯ ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರ ಪೀಠದ ಮುಂದೆ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ‘ಲೈವ್ ಲಾ’ ಸಂಸ್ಥೆ ಈ ವರದಿ ಪ್ರಕಟಿಸಿದೆ.
ಅಡ್ಡವಿಚಾರಣೆಯಲ್ಲಿ ಸಾಕ್ಷ್ಯಾಧಾರ ಮಂಡನೆ
ಲಂಡನ್ನಲ್ಲಿ ನೀಡಿದ್ದ ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಸತ್ಯಕಿ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಗುರುವಾರ ನಡೆದ ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ದೂರುದಾರ ಸತ್ಯಕಿ ಅವರನ್ನು ಅಡ್ಡವಿಚಾರಣೆಗೆ (Cross-examination) ಒಳಪಡಿಸಿದರು.
ಪುಸ್ತಕದ ಪ್ರತಿಯನ್ನು ಕೋರ್ಟ್ಗೆ ಹಾಜರುಪಡಿಸಿದ ವಕೀಲ ಮಿಲಿಂದ್ ಪವಾರ್, ಅದರಲ್ಲಿ ಉಲ್ಲೇಖವಾಗಿರುವ ವೈಜ್ಞಾನಿಕ ಪ್ರಬಂಧಗಳ ಸಾಲುಗಳನ್ನು ನ್ಯಾಯಪೀಠದ ಗಮನಕ್ಕೆ ತಂದರು.”ಮನುಷ್ಯನು ಬ್ರಹ್ಮಾಂಡದ ದೇವರೊಂದಿಗೆ ವೈಯಕ್ತಿಕ ಬಾಂಧವ್ಯ ಬೆಳೆಸಿಕೊಳ್ಳುವ ಬಾಲಿಶ ಆಸೆಯನ್ನು ತೊರೆಯಬೇಕು. ‘ದೇವರು ನನಗೆ ಒಳಿತನ್ನು ಮಾಡುತ್ತಾನೆ, ಹಾಗೆ ಮಾಡಿದರೆ ನಾನು ಸತ್ಯನಾರಾಯಣ ಪೂಜೆ ಮಾಡುತ್ತೇನೆ’ ಎನ್ನುವುದು ಮೂರ್ಖತನ. ನಮಗೆ ಸಂಕಷ್ಟ ತರುವವನೂ ಅದೇ ದೇವರು, ತದನಂತರ ರಕ್ಷಿಸುವವನೂ ಅದೇ ದೇವರು ಎನ್ನುವುದಾದರೆ ಅಂತಹ ಪೂಜೆ ನಿರರ್ಥಕ” ಎಂದು ಸಾವರ್ಕರ್ ತಮ್ಮ ಪುಸ್ತಕದಲ್ಲಿ ಪ್ರತಿಪಾದಿಸಿರುವುದನ್ನು ವಕೀಲರು ಉಲ್ಲೇಖಿಸಿದರು.
ಪುಸ್ತಕದಲ್ಲಿದ್ದ ಮತ್ತಷ್ಟು ವಿಚಾರಗಳನ್ನು ಕೋರ್ಟ್ನಲ್ಲಿ ಪ್ರಸ್ತಾಪಿಸಿದ ವಕೀಲ ಪವಾರ್, ಅಲ್ಲಾವುದ್ದೀನ್ ಖಿಲ್ಜಿಯಂತಹ ಸುಲ್ತಾನರು ಮಹಾರಾಷ್ಟ್ರ ಸೇರಿದಂತೆ ಭಾರತದಾದ್ಯಂತ ದಾಳಿ ನಡೆಸಿ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸುತ್ತಿದ್ದಾಗ ಯಾವುದೇ ದೇವರು ತಡೆಯಲು ಬರಲಿಲ್ಲ ಎಂಬುದನ್ನು ಸಾವರ್ಕರ್ ಬರೆದಿದ್ದಾರೆ ಎಂಬುದನ್ನು ತೋರಿಸಿಕೊಟ್ಟರು.
ವೈಜ್ಞಾನಿಕ ಮನೋಭಾವವೇ ಶಕ್ತಿ: ಮಂತ್ರ ಜಪಿಸುವುದರಿಂದ ಅಥವಾ ಐದು ಬಾರಿ ನಮಾಜ್ ಮಾಡುವುದರಿಂದ ಪ್ರಗತಿ ಸಾಧ್ಯವಿಲ್ಲ, ಬದಲಿಗೆ ಕೇವಲ ವೈಜ್ಞಾನಿಕ ಮನೋಭಾವ ಹಾಗೂ ಆಧುನಿಕ ಚಿಂತನೆಗಳಿಂದ ಮಾತ್ರ ಜಗತ್ತಿನಲ್ಲಿ ಯಶಸ್ಸು ಸಿಗುತ್ತದೆ ಎಂದು ಸಾವರ್ಕರ್ ಬರೆದಿದ್ದಾರೆ.
ಬದಲಾಗುವ ಸನಾತನ ಧರ್ಮ: ಪ್ರಕೃತಿಯ ನಿಯಮಗಳೇ ಶಾಶ್ವತ (ಸನಾತನ ಧರ್ಮ) ಹಾಗೂ ಅವು ಕಾಲದ ಓಟಕ್ಕೆ ತಕ್ಕಂತೆ ಬದಲಾಗುತ್ತಾ ಸಾಗಬೇಕು ಎಂದು ಅವರು ವ್ಯಾಖ್ಯಾನಿಸಿದ್ದರು.
ವಕೀಲರ ಆಕ್ಷೇಪ ತಳ್ಳಿದ ನ್ಯಾಯಾಲಯ
ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು ಈ ಪುಸ್ತಕವನ್ನು ಉಲ್ಲೇಖಿಸುವುದಕ್ಕೆ ಸತ್ಯಕಿ ಪರ ವಕೀಲರು ತೀವ್ರ ಆಕ್ಷೇಪ ಎತ್ತಿದರು. ಆದರೆ, ಸತ್ಯಕಿ ಅವರೇ ತಮ್ಮ ಮುಖ್ಯ ವಿಚಾರಣೆ ಸಮಯದಲ್ಲಿ ಈ ಗ್ರಂಥವನ್ನು ಉಲ್ಲೇಖಿಸಿದ್ದರಿಂದ, ಅದರ ಕುರಿತು ಅಡ್ಡವಿಚಾರಣೆ ನಡೆಸುವ ಸಂಪೂರ್ಣ ಹಕ್ಕು ಪ್ರತಿವಾದಿಗೆ ಇದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.ಅಂತಿಮವಾಗಿ, “ಈ ಪುಸ್ತಕವನ್ನು ಸಾವರ್ಕರ್ ಅವರೇ ಬರೆದಿದ್ದಾರೆ ಹಾಗೂ ಇದರಲ್ಲಿರುವ ವಿಚಾರಗಳು ಸತ್ಯ” ಎಂದು ಸತ್ಯಕಿ ಸಾವರ್ಕರ್ ಒಪ್ಪಿಕೊಂಡರು.
ಪ್ರಕರಣದ ಹಿನ್ನೆಲೆ
“ಸಾವರ್ಕರ್ ಅವರು ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾಗಿ ತಮ್ಮ ಪುಸ್ತಕದಲ್ಲೇ ಬರೆದುಕೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಲಂಡನ್ ಭಾಷಣದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸತ್ಯಕಿ ದೂರು ನೀಡಿದ್ದರು. ಐಪಿಸಿ ಸೆಕ್ಷನ್ 500 ರ ಅಡಿಯಲ್ಲಿ ಶಿಕ್ಷೆ ವಿಧಿಸುವಂತೆ ಕೋರಿದ್ದ ಈ ಪ್ರಕರಣದ ಮುಂದಿನ ವಿಚಾರಣೆ ಶೀಘ್ರದಲ್ಲೇ ಮುಂದುವರಿಯಲಿದೆ.

