ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಉಮೇಶ ಮೇಟಿ ಹಾಗೂ ದಾವಣಗೆರೆಯಲ್ಲಿ ಸಮರ್ಥ್ ಶಾಮನೂರು ಗೆದ್ದೆ ಗೆಲ್ಲುತ್ತಾರೆ, ಅದರಲ್ಲಿ ಯಾವುದೇ ಸಂದೇಹ ಬೇಡ, ಆದರೆ ಎಷ್ಟು ಅಂತರದಿಂದ ಗೆಲ್ಲುತ್ತಾರೆಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲವೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕ್ಷೇತ್ರವನ್ನು ಮೊತ್ತೊಂದು ಕ್ಷೇತ್ರಕ್ಕೆ ಹೊಲಿಕೆ ಮಾಡಲು ಆಗುವುದಿಲ್ಲ. ಶಿಗ್ಗಾಂವಿ ಗೆದ್ದ ಹಾಗೆ ಬಾಗಲಕೋಟೆ ಗೆಲ್ಲುತ್ತೇವೆ ಎನ್ನುವುದು ತಪ್ಪು. ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಕಾಲಿಟ್ಟ ನಂತರ ನಮಗೆ ಅಲ್ಲಿನ ಸಮಸ್ಯೆಗಳು ಕಂಡವು, ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಸ್ಥಾನವನ್ನು ಮರಳಿ ಪಡೆಯುವುದು ಕಾಂಗ್ರೆಸ್ಗೆ ಅತ್ಯಂತ ಮುಖ್ಯವಾಗಿತ್ತು. ಇದು ಕೇವಲ ಒಂದು ಉಪಚುನಾವಣೆಯಲ್ಲ, ಬದಲಿಗೆ ಪಕ್ಷದ ಬಲವನ್ನು ಸಾಬೀತುಪಡಿಸುವ ವೇದಿಕೆ ಎಂದರು.
ದೊಡ್ಡ ಸಭೆ ಮಾಡಿ ಐವತ್ತು ಸಾವಿರ ಅಥವಾ ಒಂದು ಲಕ್ಷ ಜನಸಂಖ್ಯೆ ಸೇರಿದರೆ ಚುನಾವಣೆ ಗೆಲ್ಲುತ್ತೇವೆ ಎಂದು ಅನ್ನುಕೊಳ್ಳುವುದು ತಪ್ಪು. ಬಾಗಲಕೋಟೆಯಲ್ಲಿ ತಳಮಟ್ಟದಲ್ಲಿ ಕಾರ್ಯಕರ್ಯತರನ್ನು ಒಗ್ಗೂಡಿಸಿ ಚುನುವಣೆ ಗೆಲ್ಲಲು ಪ್ರಯತ್ನಿಸಿದ್ದೇವೆ. ಬಾಗಲಕೋಟೆ, ದಾವಣಗೆರೆ ಎರಡು ನಮ್ಮ ಕ್ಷೇತ್ರಗಳಾಗಿದ್ದು, ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಅನಿರ್ವಾಯತೆ ಇತ್ತು. ಏಕೆಂದರೆ ಎರಡಲ್ಲಿ ಒಂದು ಕ್ಷೇತ್ರವನ್ನು ಗೆಲ್ಲದಿದ್ದರೆ ಬಿಜೆಪಿಯವರು ನಮ್ಮನ್ನು ಎರಡು ವರ್ಷ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ನಾವು, ನಮ್ಮ ನಾಯಕರು ಸೇರಿ ಚುನಾವಣೆ ಗೆಲ್ಲಲು ಆಸಕ್ತಿ ತೋರಿದ್ದೇವೆ ಎಂದರು.
ಇನ್ನು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ, ಬಂಡಾಯದ ಕುರಿತು ಮಾತನಾಡಿದ ಅವರು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಅದೇ ಸಮಾಜಕ್ಕೆ ಟಿಕೆಟ್ ನೀಡಬೇಕಿತ್ತು. ಆದರೆ ದಾವಣಗೆರೆಯಲ್ಲಿ ಇಷ್ಟು ದಿನ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರೇ ಪ್ರತಿನಿಧಿಸುತ್ತಿದ್ದರು. ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗಿದೆ. ಅಲ್ಪಸಂಖ್ಯಾತ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆಂದು ಭರವಸೆ ನೀಡಿದರು.
ಅಹಿಂದ ಸಂಘಟನೆಯಿಂದ ಕಾಂಗ್ರೆಸ್ಗೆ ಆನೆಬಲ:ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಅಹಿಂದ ವರ್ಗಗಳೇ ಭದ್ರ ಬುನಾದಿ. ಈ ವರ್ಗಗಳನ್ನು ನಾವು ಎಷ್ಟು ಗಟ್ಟಿಗೊಳಿಸುತ್ತೇವೆಯೋ, ಅಷ್ಟು ಪಕ್ಷಕ್ಕೆ ಬಲ ಬರುತ್ತದೆ. ಬಾಗಲಕೋಟೆ ಉಪಚುನಾವಣೆಯಲ್ಲೂ ಅಹಿಂದ ಮತದಾರರು ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಕೈ ಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ರಾಜಕೀಯ ಚರ್ಚೆಗಳ ಬಗ್ಗೆ , ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಬೇಕಾಗಿದೆ. ಅದು ಅನಿರ್ವಾಯವೂ ಇದೆ. ಆದರೆ ಎಲ್ಲಾ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

