ಬೆಂಗಳೂರು: ಕೆ.ಎನ್.ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ರಾಜಣ್ಣ ಅವರನ್ನು ವಜಾ ಮಾಡಿರುವುದು ಹೈಕಮಾಂಡ್ ನಿರ್ಧಾರ. ಈ ಬಗ್ಗೆ ರಾಜಣ್ಣ ಅವರೇ ಹೇಳಿದ್ದಾರೆ. ಹೈಕಾಂಡ್ ಬಳಿ ಹೋಗಿ ಅವರು ಮಾತನಾಡುತ್ತಾರೆ. ಅವರ ವಜಾ ಬಗ್ಗೆ ನಾನು ವ್ಯಾಖ್ಯಾನ ಮಾಡಲ್ಲ ಎಂದರು.
ರಾಜಣ್ಣ ವಜಾಗೊಳಿಸಿರುವುದು ಸಮುದಾಯಕ್ಕೆ ಮಾಡಿದ ಮೋಸ ಅಂತಾ ಹೇಳಲಾಗಲ್ಲ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ರಾಜಣ್ಣ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗುವುದಾಗಿ ಹೇಳಿದ್ದಾರೆ. ಆಗ ಎಲ್ಲವೂ ಸರಿ ಹೋಗಬಹುದು ಎಂದು ತಿಳಿಸಿದ್ದಾರೆ.
ಇನ್ನು ಇದು ನಮ್ಮ ಪಕ್ಷದ ನಿರ್ಧಾರ ವಿಪಕ್ಷಗಳು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಸಿಎಂ ಸ್ಪಷ್ಟನೆ ಕೊಡಬಹುದು. ದೆಹಲಿ ಭೇಟಿ ಬಳಿಕ ಎಲ್ಲವೂ ತಿಳಿಯಾಗಬಹುದು. ರಾಜಕೀಯದಲ್ಲಿ ಹುಷಾರಾಗಿರಬೇಕು ಇಲ್ಲದಿದ್ದರೆ ಹೀಗಾಗುತ್ತದೆ ಎಂದಿದ್ದಾರೆ.