ನಿನ್ನೆ ( ಮಾರ್ಚ್ 1 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಕಂಡು ಸೆಮಿಫೈನಲ್ ಪ್ರವೇಶಿಸಿತು.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಬಾರಿಸಿ ಗೆಲುವಿನ ರೂವಾರಿಯಾಗಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು.
ತಂಡಕ್ಕೆ ಗೆಲುವು ತಂದಿಟ್ಟ ಸಂಜು ಸ್ಯಾಮ್ಸನ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದು, ‘ಇದು ನನಗೆ ನಿಜವಾಗಿಯೂ ಪ್ರಪಂಚವೇ ಸರಿ. ನಾನು ಆಟವಾಡಲು ಶುರು ಮಾಡಿದ ದಿನದಿಂದ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಈ ದಿನವೇ ನಾನು ಕಾಯುತ್ತಿದ್ದ ದಿನವೆನಿಸುತ್ತದೆ. ಇದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಪಯಣದುದ್ದಕ್ಕೂ ಸಾಕಷ್ಟು ಏಳುಬೀಳು ಕಂಡಿದ್ದೇನೆ. ನಾನು ಯಶಸ್ಸು ಸಾಧಿಸುತ್ತೀನಾ, ದೇಶಕ್ಕಾಗಿ ಒಂದೊಳ್ಲೆ ಆಟವಾಡುತ್ತೀನಾ ಎಂದು ಅನುಮಾನಿಸುತ್ತಲೇ ಇದ್ದೆ. ಆದರೆ ನಾನು ನಂಬಿಕೆ ಕಳೆದುಕೊಳ್ಳಲಿಲ್ಲ. ಇಂದು ನನ್ನನ್ನು ಆಶೀರ್ವದಿಸಿದ್ದಕ್ಕೆ ಲಾರ್ಡ್ ಆಲ್ಮೈಟಿಗೆ ಧನ್ಯವಾದಗಳು. ನಾನಿಂದು ತುಂಬಾ ಸಂತಸಗೊಂಡಿದ್ದೇನೆ’ ಎಂದರು.
ಇನ್ನೂ ಮುಂದುವರಿದು ಮಾತನಾಡಿದ ಸಂಜು ‘ನಾನು ಟಿ ಟ್ವೆಂಟಿ ಮಾದರಿಯನ್ನು ಹಲವು ವರ್ಷಗಳಿಂದ ಆಡುತ್ತಿದ್ದೇನೆ. 12 ವರ್ಷಗಳಿಂದ ಐಪಿಎಲ್ ಆಡುತ್ತಿದ್ದೇನೆ ಹಾಗೂ ದೇಶಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಆಡುತ್ತಿದ್ದೇನೆ. ಆದರೆ ಕಣಕ್ಕಿಳಿದು ಆಡುತ್ತಿರಲಿಲ್ಲ. ಡಗ್ಔಟ್‌ನಲ್ಲಿ ಕುಳಿತು ಶ್ರೇಷ್ಠರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದನ್ನು ನೋಡಿ ಕಲಿತೆ. ಅವರು ಆಡುತ್ತಿದ್ದನ್ನು ನೋಡಿ ಕಲಿಯುವುದು ತುಂಬಾ ಮುಖ್ಯ. ಅದು ನನಗೆ ತುಂಬಾ ಸಹಾಯ ಮಾಡಿತು. ನಾನು 50ರಿಂದ 60 ಪಂದ್ಯಗಳನ್ನು ಮಾತ್ರ ಆಡಿದ್ದೇನೆ, ಆದರೆ ನೂರಕ್ಕೂ ಹೆಚ್ಚು ಬಾರಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಂದ್ಯವನ್ನು ಫಿನಿಷ್ ಮಾಡುವುದನ್ನು ಕಂಡಿದ್ದೇನೆ. ಆಟಕ್ಕನುಗುಣವಾಗಿ ಅವರು ಹೇಗೆ ಪಂದ್ಯವನ್ನು ತಿರುಗಿಸುತ್ತಿದ್ದರು ಎಂಬುದನ್ನು ನೋಡಿದ್ದೇನೆ’ ಎಂದು ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಕೊಂಡಾಡಿದರು.
ಅಲ್ಲದೇ ‘ಕೊನೆಯ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವ ಉದ್ದೇಶ ತಂಡದ್ದಾಗಿತ್ತು. ಹೀಗಾಗಿ ನಾನು ಮೊದಲ ಎಸೆತದಿಂದಲೇ ದೊಡ್ಡ ಹೊಡೆತಗಳನ್ನು ಬಾರಿಸಬೇಕಾಯಿತು. ಆದರೆ ಈ ಪಂದ್ಯ ವಿಭಿನ್ನ. ದೊಡ್ಡ ಹೊಡೆತಕ್ಕೆ ಕೈಹಾಕಿದರೆ ವಿಕೆಟ್ ಕಳೆದುಕೊಳ್ಳುವ ಕಾರಣ ಸರಿಯಾಗಿ ಚೆಂಡನ್ನು ಗಮನಿಸಿ ಆಡಿದೆ. ಇದು ನನ್ನ ಪಾಲಿಗೆ ಜೀವನದ ದೊಡ್ಡ ದಿನ. ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ದೊಡ್ಡ ಬೆಂಬಲ ಕೊಟ್ಟರು. ಜತೆಗೆ ಮತ್ತೊಂದೆಡೆ ನನ್ನಿಂದ ಸಾಧ್ಯವಾಗದಿದ್ದರೆ ಏನು ಎಂಬ ಪ್ರಶ್ನೆ ಸಹ ತಲೆಯಲ್ಲಿ ಓಡುತ್ತಾ ಇತ್ತು. ಆ ಯೋಚನೆ ಬಂದಾಗಲೆಲ್ಲ ನನ್ನನ್ನು ನಾನು ಪ್ರಸ್ತುತ ಸ್ಥಿತಿಗೆ ಕರೆತಂದು, ನನ್ನ ಆಟವನ್ನು ನಂಬಿ ಚೆಂಡಿಗೆ ಅನುಗುಣವಾಗಿ ಬ್ಯಾಟ್ ಬೀಸಿದೆ. ಅದು ಇಂದು ಕೆಲಸ ಮಾಡಿತು’ ಎಂದು ಸಂಜು ಸ್ಯಾಮ್ಸನ್ ತಿಳಿಸಿದರು.

