ನಿನ್ನೆ ( ಮಾರ್ಚ್ 1 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು. ಟಿ ಟ್ವೆಂಟಿ ಮಾದರಿಯಲ್ಲಿ ದೈತ್ಯ ತಂಡ ಎನಿಸಿಕೊಂಡ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕಠಿಣ ಗುರಿಯನ್ನು ಬೆನ್ನತ್ತಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆಲುವು ದಾಖಲಿಸಿ ಸೆಮಿಫೈನಲ್ ಅರ್ಹತೆ ಗಿಟ್ಟಿಸಿಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ಇದು ಭಾರತ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಚೇಸ್ ಮಾಡಿದ ಅತಿದೊಡ್ಡ ರನ್ ಮೊತ್ತವಾಗಿದ್ದು, ಈ ಬೃಹತ್ ದಾಖಲೆ ನಿರ್ಮಾಣವಾಗಲು ಕಾರಣವಾಗಿದ್ದು ಸಂಜು ಸ್ಯಾಮ್ಸನ್ ಅಬ್ಬರದ ಇನ್ನಿಂಗ್ಸ್. 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಟ ಎನಿಸಿಕೊಂಡರು.
ಹೀಗೆ ಅತಿ ಮುಖ್ಯವಾದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಪಷ್ಟ ನೆಲೆಕಂಡುಕೊಂಡಂತಾಗಿದೆ. ಹೆಚ್ಚು ಅವಕಾಶ ಸಿಗದಿದ್ದ ಸಂಜು ತನ್ನನ್ನು ತಾನು ಸಾಬೀತುಪಡಿಸಿಕೊಂಡಿದ್ದು, ತಂಡದ ಖಾಯಂ ಸದಸ್ಯನಾಗುವ ಎಲ್ಲ ಲಕ್ಷಣಗಳು ಕಾಣತೊಡಗಿವೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್ ದೇಶವನ್ನು ಗೆಲ್ಲಿಸುವುದು ತನ್ನ ಬಹು ದಿನಗಳ ಕನಸು ಇಂದು ನನಸಾಗಿದೆ ಎಂದು ಹೇಳಿಕೊಂಡರು. ಹೀಗೆ ಸಂಸತಸ ಕ್ಷಣವನ್ನು ಕಣ್ತುಂಬಿಕೊಂಡ ಸ್ಯಾಮ್ಸನ್ ಮೈದಾನದಲ್ಲಿಯೇ ತನ್ನ ನೆಚ್ಚಿನ ಮಹಿಳೆ, ಪತ್ನಿ ಚಾರುಲತಾ ಸ್ಯಾಮ್ಸನ್‌ಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ತನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದು ಬೆಂಬಲಿಸಿದ ಮಡದಿಗೆ ಸಂತಸದ ಕ್ಷಣಗಳನ್ನು ವಿಡಿಯೊ ಕರೆಯಲ್ಲಿ ತೋರಿಸುತ್ತಿದ್ದಾರೆ.

