HomeKarnatakaGOOD NEWS : ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ₹5 ಲಕ್ಷದವರೆಗೆ ನಗದುರಹಿತ...

GOOD NEWS : ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ₹5 ಲಕ್ಷದವರೆಗೆ ನಗದುರಹಿತ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಜಾರಿ!

ಬೆಂಗಳೂರು: ರಾಜ್ಯದ ಸರ್ಕಾರಿ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಕರ್ನಾಟಕ ಸರ್ಕಾರ ಮಹತ್ವದ ಗುಡ್‌ನ್ಯೂಸ್ ನೀಡಿದೆ. 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ವಾರ್ಷಿಕ ₹5 ಲಕ್ಷದವರೆಗೆ ನಗದುರಹಿತ ಆರೋಗ್ಯ ಸೇವೆ ಒದಗಿಸುವ ‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಆದೇಶದ ಪ್ರಕಾರ, ಈ ಯೋಜನೆಯನ್ನು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (AB-ArK) ಯೋಜನೆಯಡಿ APL ನೀತಿಯನ್ವಯ ಅನುಷ್ಠಾನಗೊಳಿಸಲಾಗುತ್ತದೆ.

ಯಾರೆಲ್ಲರಿಗೆ ಸೌಲಭ್ಯ?

70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ನಿಯಮಿತ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಪಿಂಚಣಿದಾರರ ಪತಿ ಅಥವಾ ಪತ್ನಿಗೂ ಸೌಲಭ್ಯ ಲಭ್ಯವಾಗಲಿದೆ. ಅಲ್ಲದೆ, ಪಿಂಚಣಿದಾರರ ಅವಲಂಬಿತ ದಿವ್ಯಾಂಗ ಮಕ್ಕಳನ್ನೂ ಯೋಜನೆಯಡಿ ಪರಿಗಣಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಟುಂಬಕ್ಕೆ ₹5 ಲಕ್ಷದವರೆಗೆ ಚಿಕಿತ್ಸೆ

‘ಸಂಧ್ಯಾ ಕಿರಣ’ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ ₹5 ಲಕ್ಷದವರೆಗೆ ಆರೋಗ್ಯ ಸೇವೆಗಳನ್ನು ನಗದುರಹಿತವಾಗಿ ಪಡೆಯಲು ಅವಕಾಶವಿರಲಿದೆ. AB-ArK ಯೋಜನೆಯಡಿ ಗುರುತಿಸಲ್ಪಟ್ಟ ಆಸ್ಪತ್ರೆಗಳಲ್ಲಿ ರೆಫರಲ್ ಆಧಾರದ ಮೇಲೆ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆ, ಒಳರೋಗಿ ಹಾಗೂ ತುರ್ತು ಚಿಕಿತ್ಸಾ ಸೇವೆಗಳನ್ನು ಪಡೆಯಬಹುದು.

ಪಿಂಚಣಿದಾರರೇ ಎಷ್ಟು ವಂತಿಕೆ ನೀಡಬೇಕು?

ಈ ಯೋಜನೆಯು ವಂತಿಕೆ ಆಧಾರಿತವಾಗಿದ್ದು, ಅರ್ಹ ನಿಯಮಿತ ಪಿಂಚಣಿದಾರರು ಮೂಲ ಪಿಂಚಣಿಯ ಶೇ.1.25ರಷ್ಟು ವಂತಿಕೆ ನೀಡಬೇಕು. ಕುಟುಂಬ ಪಿಂಚಣಿದಾರರು ಮೂಲ ಪಿಂಚಣಿಯ ಶೇ.0.75ರಷ್ಟು ವಂತಿಕೆ ಪಾವತಿಸಬೇಕು.

ಯೋಜನೆಯಡಿ ಒಟ್ಟು ಚಿಕಿತ್ಸಾ ವೆಚ್ಚದ 70% ವಂತಿಕೆ ಮೂಲಕ ಪಿಂಚಣಿದಾರರ ಪಾಲು ಹಾಗೂ ಉಳಿದ 30% ಸರ್ಕಾರದ ಪಾಲು ಆಗಿರಲಿದೆ.

ಬಳಕೆ ಪ್ರಮಾಣ ಹೆಚ್ಚಾದರೆ ವಂತಿಕೆ ಹೆಚ್ಚಳ

ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಕಾಪಾಡಲು, ಯೋಜನೆಯ ಬಳಕೆ ಪ್ರಮಾಣವು ಒಟ್ಟು ಸಂಗ್ರಹಿತ ನಿಧಿಯ ಶೇ.85ಕ್ಕಿಂತ ಹೆಚ್ಚಾದರೆ, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಂದ ಸಂಗ್ರಹಿಸುವ ವಂತಿಕೆಯನ್ನು ಶೇ.0.05ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆ ಮಾಡಲಾಗಿದೆ.

ಅದೇ ರೀತಿ, ಯೋಜನೆಯಡಿ SAST ಸಂಸ್ಥೆಯು ನಿಧಿಯನ್ನು ಬಳಸಿಕೊಳ್ಳುವಾಗ ಶೇ.2ರ ಆಡಳಿತ ವೆಚ್ಚವನ್ನು ಒಳಗೊಂಡಿರುತ್ತದೆ.

ನೋಂದಣಿಗೆ ಗಡುವು

ಈಗಾಗಲೇ ನಿವೃತ್ತರಾಗಿರುವ ಹಾಗೂ ಯೋಜನೆಗೆ ವಂತಿಕೆ ನೀಡಲು ಇಚ್ಛಿಸುವ ಪಿಂಚಣಿದಾರರಿಗೆ ನೋಂದಣಿಗಾಗಿ ಮೂರು ತಿಂಗಳ ಅವಧಿ ನಿಗದಿಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ನಿವೃತ್ತಿಯಾಗುವ ಪಿಂಚಣಿದಾರರು ನಿವೃತ್ತಿಯಾದ ದಿನಾಂಕದಿಂದ ಎರಡು ತಿಂಗಳೊಳಗೆ ನೋಂದಾಯಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳದಿದ್ದರೆ ಯೋಜನೆಯ ಸೌಲಭ್ಯ ಪಡೆಯಲು ಅನರ್ಹರಾಗಲಿದ್ದಾರೆ.

ಸರ್ಕಾರದ ಪಾಲು ಯಾವಾಗ ಬಿಡುಗಡೆಯಾಗಲಿದೆ?

ಯೋಜನೆಯ ಒಟ್ಟು ನಿಧಿಯು ಅದರ ವಾರ್ಷಿಕ ಬಳಕೆಯ ಮಟ್ಟದ ಶೇ.80ರಷ್ಟನ್ನು ತಲುಪಿದಾಗ ಮಾತ್ರ ರಾಜ್ಯ ಸರ್ಕಾರದ ವಾರ್ಷಿಕ ಪಾಲನ್ನು ಬಿಡುಗಡೆ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.

ಯೋಜನೆಯ ಅನುಷ್ಠಾನ, ಆರೋಗ್ಯ ಸೇವೆಗಳ ಬಳಕೆ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ಅಗತ್ಯವಿದ್ದರೆ ಹೊಸ ಚಿಕಿತ್ಸಾ ವಿಧಾನಗಳನ್ನು ಸೇರ್ಪಡೆಗೊಳಿಸುವುದು ಸೇರಿದಂತೆ ಯೋಜನೆಯ ನೀತಿಯಲ್ಲಿ ಬದಲಾವಣೆಗಳನ್ನು ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಅವಕಾಶ ನೀಡಲಾಗಿದೆ.

ಈ ಮಹತ್ವದ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಆಕುಕ 287 ಸಿಜಿಇ 2026, ದಿನಾಂಕ 02-09-2026ರಂತೆ ಹೊರಡಿಸಲಾಗಿದೆ. ಆರ್ಥಿಕ ಇಲಾಖೆಯ ಸಹಮತಿ ಹಾಗೂ ಸಚಿವ ಸಂಪುಟದ ಅನುಮೋದನೆಯ ಆಧಾರದ ಮೇಲೆ ಯೋಜನೆಗೆ ಚಾಲನೆ ನೀಡಲಾಗಿದೆ.

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular