HomeKarnatakaBIG NEWS : ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕೇಂದ್ರದಿಂದ ಬಿಗ್ ಪ್ಲಾನ್; ಸೆ.15ರಿಂದ ಹೊಸ ನಿಯಮಗಳು...

BIG NEWS : ಸಕ್ಕರೆ ಬೆಲೆ ನಿಯಂತ್ರಣಕ್ಕೆ ಕೇಂದ್ರದಿಂದ ಬಿಗ್ ಪ್ಲಾನ್; ಸೆ.15ರಿಂದ ಹೊಸ ನಿಯಮಗಳು ಜಾರಿ

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶಾದ್ಯಂತ ಸಕ್ಕರೆ ಬೆಲೆಗಳು (Sugar Prices) ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ನಿಯಂತ್ರಿಸುವುದು ಹಾಗೂ ಪೂರೈಕೆಯನ್ನು ಸ್ಥಿರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ದೇಶಾದ್ಯಂತ ವ್ಯಾಪಾರಿಗಳ ಬಳಿ ಇರಿಸಬಹುದಾದ ಗರಿಷ್ಠ ಸಕ್ಕರೆ ದಾಸ್ತಾನು ಮಿತಿಗೆ ಕೇಂದ್ರ ಸರ್ಕಾರ ಕಠಿಣ ನಿರ್ಬಂಧ ವಿಧಿಸಿದೆ. ಇದುವರೆಗೆ ಇದ್ದ 4,000 ಕ್ವಿಂಟಾಲ್‌ಗಳ ದಾಸ್ತಾನು ಮಿತಿಯನ್ನು ಅರ್ಧಕ್ಕೆ ಇಳಿಸಿ, ಗರಿಷ್ಠ 2,000 ಕ್ವಿಂಟಾಲ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಇದರ ಜೊತೆಗೆ, ವ್ಯಾಪಾರಿಗಳು ಖರೀದಿಸಿದ ಸಕ್ಕರೆಯನ್ನು 30 ದಿನಗಳಿಗಿಂತ ಹೆಚ್ಚು ಕಾಲ ತಮ್ಮ ಬಳಿ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನಿಗದಿತ ಅವಧಿಯೊಳಗೆ ಸಕ್ಕರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಬ್ಬಗಳ ಸೀಸನ್‌ ಅನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ನಿಯಮಗಳನ್ನು ಸೆಪ್ಟೆಂಬರ್ 15ರಿಂದ ನವೆಂಬರ್ 30ರವರೆಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಕೃತಕ ಕೊರತೆ ಸೃಷ್ಟಿಸಿ ಸಕ್ಕರೆಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಕ್ರಮ ದಾಸ್ತಾನುದಾರರ (ಹೋರ್ಡಿಂಗ್) ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಬಂಧಿತ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆ ಹೆಚ್ಚಾಗಲಿದ್ದು, ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಹೊರೆ ಬೀಳದಂತೆ ಸಕ್ಕರೆ ದರಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಸಕ್ಕರೆ ಮಾರುಕಟ್ಟೆಯ ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಅಕ್ರಮ ದಾಸ್ತಾನು ತಡೆ ಹಾಗೂ ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

2,000 ಕ್ವಿಂಟಲ್‌ಗೆ ದಾಸ್ತಾನು ಮಿತಿ

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ ಖಚಿತಪಡಿಸಿಕೊಳ್ಳಲು ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಸಕ್ಕರೆ ವಿತರಕರು ಇನ್ನು ಮುಂದೆ ಗರಿಷ್ಠ 2,000 ಕ್ವಿಂಟಲ್ ಸಕ್ಕರೆಯನ್ನು ಮಾತ್ರ ದಾಸ್ತಾನು ಮಾಡಬಹುದಾಗಿದೆ.

ಸೆಪ್ಟೆಂಬರ್ 15ರಿಂದ ಸಕ್ಕರೆ ವ್ಯಾಪಾರಿಗಳು ದಾಸ್ತಾನು ಸ್ವೀಕರಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚಿನ ಅವಧಿಗೆ ಸಕ್ಕರೆಯನ್ನು ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲೂ 2,000 ಕ್ವಿಂಟಲ್‌ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಇಡಬಾರದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಕೋಲ್ಕತ್ತಾಗೆ ಮಾತ್ರ ವಿನಾಯಿತಿ

ಕೋಲ್ಕತ್ತಾ ಮತ್ತು ಅದರ ವ್ಯಾಪ್ತಿಯ ಮಹಾನಗರ ಪ್ರದೇಶಗಳಿಗೆ ಈ ಹೊಸ ದಾಸ್ತಾನು ಮಿತಿ ಅನ್ವಯಿಸುವುದಿಲ್ಲ. ಇಲ್ಲಿ ಈಗಾಗಲೇ ಜಾರಿಯಲ್ಲಿರುವ 4,000 ಕ್ವಿಂಟಲ್ ದಾಸ್ತಾನು ಮಿತಿಯೇ ಮುಂದುವರಿಯಲಿದೆ.

ಕೋಲ್ಕತ್ತಾ ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆ ಪಡೆಯುತ್ತಿದ್ದು, ಈಶಾನ್ಯ ಹಾಗೂ ದೇಶದ ಪೂರ್ವ ಭಾಗಗಳಿಗೆ ಸಕ್ಕರೆ ಪೂರೈಕೆ ಮಾಡುತ್ತದೆ. ಈ ಕಾರಣದಿಂದಾಗಿ ಕೋಲ್ಕತ್ತಾಗೆ ಪ್ರಸ್ತುತ ಇರುವ 4,000 ಕ್ವಿಂಟಲ್ ಮಿತಿಯನ್ನು ಮುಂದುವರಿಸಲಾಗಿದೆ ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಸಕ್ಕರೆ ಮಾರುಕಟ್ಟೆ ಮೇಲೆ ತೀವ್ರ ನಿಗಾ

ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳು, ಡೀಲರ್‌ಗಳು ಹಾಗೂ ವ್ಯಾಪಾರಿಗಳ ದಾಸ್ತಾನುಗಳ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಿದೆ. ಅಗತ್ಯ ಮೇಲ್ವಿಚಾರಣೆ ಮತ್ತು ಪರಿಶೀಲನಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಂದಿನ ವಾರಗಳಲ್ಲೂ ಈ ಕ್ರಮ ಮುಂದುವರಿಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಪರಿಣಾಮ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಸುಮಾರು ಶೇ.20ರಷ್ಟು ಇಳಿಕೆಯಾಗಿದೆ. ಚಿಲ್ಲರೆ ಬೆಲೆಯಲ್ಲಿಯೂ ಇಳಿಕೆಯ ಪ್ರವೃತ್ತಿ ಕಂಡುಬರುತ್ತಿದ್ದು, ಎಕ್ಸ್-ಮಿಲ್ ಬೆಲೆಗಳಲ್ಲೂ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಆನ್‌ಲೈನ್ ಪೋರ್ಟಲ್ ಮೂಲಕ ದಾಸ್ತಾನು ನಿರ್ವಹಣೆ

ಸಕ್ಕರೆ ಮಾರುಕಟ್ಟೆಯ ಬೆಳವಣಿಗೆಗಳ ಮೇಲೆ ಕೇಂದ್ರ ಸರ್ಕಾರ ನಿರಂತರವಾಗಿ ನಿಗಾ ವಹಿಸುತ್ತಿದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್ ಪೋರ್ಟಲ್ ಮೂಲಕ ಸಕ್ಕರೆ ದಾಸ್ತಾನುಗಳ ಘೋಷಣೆ ಹಾಗೂ ಅದರ ನವೀಕರಣಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ.

ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ, ಕ್ರಮಬದ್ಧ ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಪಾಡಲು ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ನೈಜ ವ್ಯಾಪಾರ ಮತ್ತು ವಿತರಣಾ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ.

ಆದರೆ ಯಾರಾದರೂ ಕೃತಕ ಅಭಾವ ಸೃಷ್ಟಿಸಲು, ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸಂಗ್ರಹಿಸಲು ಅಥವಾ ಬೆಲೆ ಏರಿಕೆಗೆ ಕಾರಣವಾಗಲು ಮುಂದಾದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular