ಅಮರಾವತಿ: ಸಾಧನೆ ಶಿಖರ ಏರಿದರೂ ಸಂಸ್ಕಾರ ಮರೆಯಬಾರದು ಎಂಬುದಕ್ಕೆ ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಂದ ದೇವರ ವಿಗ್ರಹ ಸ್ವೀಕರಿಸುವಾಗ ಸಚಿನ್ ತೋರಿದ ಗೌರವ ಈಗ ಇಡೀ ದೇಶದ ಗಮನ ಸೆಳೆದಿದೆ.
ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದ ಶತಮಾನೋತ್ಸವದ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು. ಈ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸಚಿನ್ ಅವರಿಗೆ ತಿರುಪತಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ನೀಡಿ ಗೌರವಿಸಲು ಮುಂದಾದರು. ಈ ಸಂದರ್ಭದಲ್ಲಿ ಸಚಿನ್ ಅವರು ವಿಗ್ರಹವನ್ನು ಸ್ವೀಕರಿಸುವ ಮುನ್ನ ತಕ್ಷಣವೇ ತಮ್ಮ ಕುರ್ಚಿಯಿಂದ ಎದ್ದು ಸ್ಟೇಜ್ ಮೇಲೆಯೇ ತಮ್ಮ ಪಾದರಕ್ಷೆಗಳನ್ನು (ಶೂ) ಬಿಚ್ಚಿ ಪಕ್ಕಕ್ಕಿಟ್ಟರು. ನಂತರ ಬರಿಗಾಲಿನಲ್ಲಿ ಬಂದು ನಂತರ ಬರಿಗಾಲಿನಲ್ಲಿ ಬಂದು ಅತ್ಯಂತ ಭಕ್ತಿಯಿಂದ ವಿಗ್ರಹವನ್ನು ಸ್ವೀಕರಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಸಚಿನ್ ಗುಣಗಾನ
ಸಚಿನ್ ಅವರ ಈ ವಿಧೇಯತೆಯ ವಿಡಿಯೋ ಈಗ ಎಕ್ಸ್ (ಟ್ವಿಟರ್) ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. “ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದರೂ, ಕ್ರಿಕೆಟ್ ದೇವರಾಗಿದ್ದರೂ ಸನಾತನ ಸಂಸ್ಕೃತಿಯನ್ನು ಸಚಿನ್ ಮರೆತಿಲ್ಲ” ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲ, ಹೊರಗೂ ಸಚಿನ್ ಒಬ್ಬ ಶಿಸ್ತಿನ ಮನುಷ್ಯ ಎಂದು ಅಭಿಮಾನಿಗಳು ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ.
ವಿಶ್ವ ಕ್ರಿಕೆಟ್‌ನ ಮಹಾನಾಯಕ:
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿದ ಏಕೈಕ ಆಟಗಾರ, ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸಿದ ದಾಖಲೆ ಸೇರಿದಂತೆ ಕ್ರಿಕೆಟ್ ಲೋಕದ ಅನ್ವಯವಾಗದ ಹಲವು ದಾಖಲೆಗಳು ಸಚಿನ್ ಹೆಸರಿನಲ್ಲಿವೆ. 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.ಸಾಧನೆಗಳು ಎಷ್ಟು ದೊಡ್ಡದಾಗಿದ್ದರೂ ಮನುಷ್ಯನ ಸಂಸ್ಕಾರ ಅಷ್ಟೇ ದೊಡ್ಡದಾಗಿರಬೇಕು ಎಂಬುದಕ್ಕೆ ಸಚಿನ್ ಅವರ ಈ ನಡೆ ಅತ್ಯುತ್ತಮ ಉದಾಹರಣೆ. ದೇವರ ವಿಗ್ರಹಕ್ಕೆ ಅವರು ನೀಡಿದ ಈ ಗೌರವ ಇಂದಿನ ಯುವ ಪೀಳಿಗೆಗೆ ಜೀವನಪಾಠದಂತಿದೆ.

