ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪ್ರಾರಂಭವಾದ ಸಂದರ್ಭದಲ್ಲಿ ರಷ್ಯಾದ ಮೇಲೆ ವಿವಿಧ ರಾಷ್ಟ್ರಗಳು ಹಲವಾರು ನಿರ್ಬಂಧಗಳನ್ನು ಹೇರಿದವು. ರಷ್ಯಾದಿಂದ ಅನಿಲ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸುವ ಕುರಿತು ಆಗ ಮಾತುಕತೆ ನಡೆದಿತ್ತು. ಈಗ ವಿವಿಧ ದೇಶಗಳು ಇದಕ್ಕೆ ಒಪ್ಪಿಗೆ ನೀಡಿವೆ.
ಜನವರಿ 26ರ ಸೋಮವಾರ ಯುರೋಪಿಯನ್ ಒಕ್ಕೂಟದ ದೇಶಗಳು ರಷ್ಯಾದ ಅನಿಲ ಆಮದನ್ನು 2027ರ ಅಂತ್ಯದ ವೇಳೆಗೆ ನಿಷೇಧಿಸುವ ಯೋಜನೆಗೆ ಅಂತಿಮ ಅನುಮೋದನೆ ನೀಡಿವೆ. ಒಕ್ಕೂಟದ ಈ ತೀರ್ಮಾನ ಈಗ ಕಾನೂನಾಗಿ ಜಾರಿಗೆ ಬರಲು ಅವಕಾಶ ಸಿಕ್ಕಿದೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ನಾಲ್ಕು ವರ್ಷಗಳ ನಂತರ, ತನ್ನ ಹಿಂದಿನ ಪ್ರಮುಖ ಅನಿಲ ಪೂರೈಕೆದಾರ ರಾಷ್ಟ್ರದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವ ಯುರೋಪಿಯನ್ ಒಕ್ಕೂಟದ ತೀರ್ಮಾನ ಈಗ ಕಾನೂನು ಬದ್ಧವಾಗಲಿದೆ.
ಬ್ರಸೆಲ್ಸ್‌ನಲ್ಲಿ ನಡೆದ ಸಭೆಯಲ್ಲಿ ಯುರೋಪಿಯನ್ ಒಕ್ಕೂಟದ ದೇಶಗಳ ಸಚಿವರು ಈ ಕಾನೂನನ್ನು ಅನುಮೋದಿಸಿದ್ದಾರೆ. ಆದರೆ ಸ್ಲೋವಾಕಿಯಾ ಮತ್ತು ಹಂಗೇರಿ ಈ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.
ಯಾವ ರಾಷ್ಟ್ರ ಹೆಚ್ಚು ಅವಲಂಬಿತ: ರಷ್ಯಾ ವಿವಿಧ ರಾಷ್ಟ್ರಗಳಿಗೆ ಅನಿಲ ಆಮದು ಮಾಡುತ್ತದೆ. ಆದರೆ ಹಂಗೇರಿಯು ಅತಿ ಹೆಚ್ಚು ಅವಲಂಬಿತ ರಾಷ್ಟ್ರವಾಗಿದೆ. ಆದ್ದರಿಂದ ಈ ವಿಚಾರವನ್ನು ಯುರೋಪಿಯನ್ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವುದಾಗಿ ಹಂಗೇರಿ ಹೇಳಿದೆ.
ರಷ್ಯಾದ ಇಂಧನ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಮತ್ತು ಮಾಸ್ಕೋದೊಂದಿಗೆ ಇರುವ ನಿಕಟ ಸಂಬಂಧವನ್ನು ಮುಂದುವರಿಸಲು ಬಯಸುತ್ತೇವೆ ಎಂದು ಹಂಗೇರಿ ಹೇಳಿದೆ. ಸ್ಲೋವಾಕಿಯಾದ ವಿರೋಧವನ್ನು ಮೀರಿ ನಿಲ್ಲಲು ಅನುಕೂಲವಾಗುವಂತೆಯೇ ನಿಷೇಧದ ತೀರ್ಮಾನವನ್ನು ಇತರ ರಾಷ್ಟ್ರಗಳು ಅನುಮೋದಿಸಿವೆ.
ಈ ಒಪ್ಪಂದದ ಅಡಿ ಯುರೋಪಿಯನ್ ಒಕ್ಕೂಟ 2026ರ ಅಂತ್ಯದ ವೇಳೆಗೆ ರಷ್ಯಾದ ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದನ್ನು ಮತ್ತು ಸೆಪ್ಟೆಂಬರ್ 30, 2027ರೊಳಗೆ ಪೈಪ್‌ಲೈನ್ ಅನಿಲ ಆಮದನ್ನು ಸ್ಥಗಿತಗೊಳಿಸಲಿದೆ. ಯಾವುದೇ ದೇಶ ರಷ್ಯಾವಲ್ಲದ ಇತರ ಮೂಲಗಳಿಂದ ತನ್ನ ಅನಿಲ ಸಂಗ್ರಹಣಾ ಕೇಂದ್ರಗಳನ್ನು ಭರ್ತಿ ಮಾಡಲು ವಿಫಲವಾದರೆ ಈ ಗಡುವು ನವೆಂಬರ್ 1, 2027ರ ತನಕ ವಿಸ್ತರಣೆ ಮಾಡಲು ಕಾನೂನು ಅವಕಾಶ ಕೊಡಲಿದೆ.
ಉಕ್ರೇನ್ ಯುದ್ಧಕ್ಕೂ ಮೊದಲು ಯುರೋಪಿಯನ್ ಒಕ್ಕೂಟದ ಒಟ್ಟು ಅನಿಲ ಪೂರೈಕೆಯಲ್ಲಿ ರಷ್ಯಾದ ಪಾಲು ಶೇ 40ಕ್ಕಿಂತ ಹೆಚ್ಚಿತ್ತು. ಇತ್ತೀಚಿನ ಮಾಹಿತಿಯ ಪ್ರಕಾರ ಈ ಪಾಲು 2025ರಲ್ಲಿ ಶೇ 13ಕ್ಕೆ ಕುಸಿದಿದೆ. ಡಿಸೆಂಬರ್‌ನಲ್ಲಿ ಒಕ್ಕೂಟದ 5 ಅತಿದೊಡ್ಡ ಆಮದುದಾರ ರಾಷ್ಟ್ರಗಳು ರಷ್ಯಾದ ಇಂಧನಕ್ಕಾಗಿ 1.4 ಬಿಲಿಯನ್ ಯುರೋಗಳನ್ನು ಖರ್ಚು ಮಾಡಿವೆ.
ಫ್ರಾನ್ಸ್ ಮತ್ತು ಬೆಲ್ಜಿಯಂ ಅನ್ನು ಹಿಂದಿಕ್ಕಿ ಹಂಗೇರಿಯು ರಷ್ಯಾದ ಇಂಧನದ ಅತಿದೊಡ್ಡ ಖರೀದಿದಾರ. ಒಕ್ಕೂಟವು 2022ರಲ್ಲಿ ರಷ್ಯಾದ ಕಡಲ ತೈಲದ ಮೇಲೆ ನಿರ್ಬಂಧಗಳನ್ನು ಹೇರಿತ್ತು, ಆದರೆ ಅನಿಲ ಆಮದಿನ ಮೇಲೆ ಎಂದಿಗೂ ನಿರ್ಬಂಧಗಳನ್ನು ಪ್ರಸ್ತಾವಿಸಿರಲಿಲ್ಲ. ಕಾರಣ ಒಕ್ಕೂಟದ ಎಲ್ಲಾ 27 ದೇಶಗಳ ಸರ್ವಾನುಮತದ ಒಪ್ಪಿಗೆಯ ಅಗತ್ಯವಿತ್ತು.
ಈ ಹೊಸ ಕಾನೂನು ಕಂಪನಿಗಳು ರಷ್ಯಾದೊಂದಿಗೆ ಹೊಸ ಅನಿಲ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಹೊಂದಿರುವವರು ಈ ನಿಷೇಧವನ್ನು ಪಾಲಿಸಲು ಅವುಗಳನ್ನು ರದ್ದುಗೊಳಿಸಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ಒಪ್ಪಂದಗಳ ಪೈಕಿ ಜೂನ್ 17, 2025ಕ್ಕಿಂತ ಮೊದಲು ಸಹಿ ಮಾಡಲಾದ ಅಲ್ಪಾವಧಿಯ ಒಪ್ಪಂದಗಳ ಅಡಿಯಲ್ಲಿನ ಆಮದನ್ನು ಎಲ್‌ಎನ್‌ಜಿಗಾಗಿ ಏಪ್ರಿಲ್ 25, 2026 ರಿಂದ ಮತ್ತು ಪೈಪ್‌ಲೈನ್ ಅನಿಲಕ್ಕಾಗಿ ಜೂನ್ 17 ರಿಂದ ನಿಷೇಧಿಸಲಾಗುತ್ತದೆ.
ಈ ಕಾನೂನು ಪಾಲಿಸಲು ವಿಫಲವಾದ ಕಂಪನಿಗಳು ತಮ್ಮ ಒಟ್ಟು ಜಾಗತಿಕ ವಾರ್ಷಿಕ ವಹಿವಾಟಿನ ಶೇಕಡಾ 3.5 ರವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ರಷ್ಯಾದ ಪೈಪ್‌ಲೈನ್ ತೈಲವನ್ನು ಹಂತ ಹಂತವಾಗಿ ನಿಲ್ಲಿಸಲು ಮತ್ತು ರಷ್ಯಾದ ಪರಮಾಣು ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹೊಸ ಕಾನೂನು ರೂಪಿಸುವ ಚಿಂತನೆಯೂ ಇದೆ.

