ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆಯಲ್ಲಿ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿಯನ್ನು ಆರಂಭಿಸಿವೆ. ಈ ಬಾರಿ ರಷ್ಯಾ ಕಂಪನಿಗಳು ಭಾರತಕ್ಕೆ ಹೆಚ್ಚುವರಿಯಾಗಿ ಶೇಕಡ 5ರಷ್ಟು ರಿಯಾಯಿತಿ ಘೋಷಿಸಿವೆ.
ಕಳೆದ ವರ್ಷ ಭಾರತ ತನ್ನ ಒಟ್ಟು ಬೇಡಿಕೆಯ ಪೈಕಿ ಶೇಕಡ 40ರಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿ ಮಾಡಿದ್ದು, ಅಮೆರಿಕದ ಸುಂಕಾಸ್ತ್ರ ಪ್ರಯೋಗ ಒತ್ತಡ ತಂತ್ರಗಳ ನಡುವೆ ಭಾರತಕ್ಕೆ ಶೇಕಡ 5ರಷ್ಟು ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡಲಾಗುವುದು ಎಂದು ರಷ್ಯಾ ಘೋಷಿಸಿದೆ.
ಸಂಕಷ್ಟದ ಪರಿಸ್ಥಿತಿಯಲ್ಲೂ ಭಾರತ ಮತ್ತು ರಷ್ಯಾ ನಡುವೆ ಇಂಧನ ಸಹಕಾರ ಮುಂದುವರೆಯಲಿದೆ ಎಂದು ರಷ್ಯಾ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ರಷ್ಯಾದ ವ್ಯಾಪಾರ ಪ್ರತಿನಿಧಿ ಇ. ಗ್ರಿವಾ ಅವರು ಈ ಬಗ್ಗೆ ಖಚಿತಪಡಿಸಿದ್ದಾರೆ. ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಯ ಮೇಲೆ ಸುಮಾರು ಶೇಕಡ 5ರಷ್ಟು ರಿಯಾಯಿತಿ ಇರುತ್ತದೆ. ರಾಜಕೀಯ ಒತ್ತಡ ಏನೇ ಇದ್ದರೂ ಭಾರತವು ಮೊದಲಿನಷ್ಟೇ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಸದಂತೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿದ್ದು, ಶೇಕಡ 50ರಷ್ಟು ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ಟ್ರಂಪ್ ಬೆದರಿಕೆಗೆ ಭಾರತ ಸಡ್ಡು ಹೊಡೆದಿದ್ದು ರಷ್ಯಾ ಜೊತೆ ವ್ಯಾಪಾರವನ್ನು ಮುಂದುವರೆಸಿದೆ. ಕಚ್ಚಾ ತೈಲ ಖರೀದಿಸುತ್ತಿದೆ.