ನವದೆಹಲಿ : ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ಯಾಸ್ ಮತ್ತು ಪೆಟ್ರೋಲ್ ಕೊರತೆಯಾಗಲಿದೆ ಎಂಬ ವದಂತಿಗಳ ಬೆನ್ನಲ್ಲೇ, ದೇಶದಲ್ಲಿ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ ಎಂಬ ಸುದ್ದಿಗಳು ವೇಗವಾಗಿ ಹರಡುತ್ತಿವೆ. ಈ ಕುರಿತು ಕೇಂದ್ರ ಸರ್ಕಾರವು ಬುಧವಾರ ನಡೆದ ಅಖಿಲಪಕ್ಷ ಸಭೆಯಲ್ಲಿ ಮಹತ್ವದ ಸ್ಪಷ್ಟನೆ ನೀಡಿದೆ.
ವದಂತಿಗಳಿಗೆ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಭಾರತದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಈಗಾಗಲೇ ಅಡುಗೆ ಅನಿಲ (LPG) ಕೊರತೆಯ ಭೀತಿಯಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುವ ಪರಿಸ್ಥಿತಿ ಬಂದಿದೆ ಎಂಬ ಪ್ರಚಾರ ನಡೆಯುತ್ತಿದೆ. ಮತ್ತೊಂದೆಡೆ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಾಗಬಹುದು ಎಂಬ ಆತಂಕದಿಂದ ವಾಹನ ಸವಾರರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧವು ಭಾರತೀಯರಲ್ಲಿ ಲಾಕ್‌ಡೌನ್ ಕಾಲದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
ಸರ್ವಪಕ್ಷ ಸಭೆಯ ಮುಖ್ಯಾಂಶಗಳು:
ಬುಧವಾರ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಹತ್ವದ ಅಖಿಲಪಕ್ಷ ಸಭೆ ನಡೆಯಿತು.
- ಲಾಕ್ ಡೌನ್ ವದಂತಿ ತಳ್ಳಿ ಹಾಕಿದ ಸರ್ಕಾರ : ಕರೋನಾ ಸಮಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಮಾದರಿಯಲ್ಲೇ ಮತ್ತೆ ನಿರ್ಬಂಧ ಹೇರಲಾಗುವುದು ಎಂಬ ಸುದ್ದಿಯಲ್ಲಿ ಸತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಜನರು ಭಯಪಡುವ ಅಗತ್ಯವಿಲ್ಲ, ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸಂದೇಶ ನೀಡಿದೆ.
- ಇಂಧನ ಕೊರತೆಇಲ್ಲ: ದೇಶದಲ್ಲಿ ಸದ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಯಾವುದೇ ಕೊರತೆಯಿಲ್ಲ ಎಂದು ಸರ್ಕಾರ ಸಭೆಯಲ್ಲಿ ತಿಳಿಸಿದೆ.
- ಜಲಸಂಧಿಯಲ್ಲಿ ಸುರಕ್ಷಿ ತಸಂಚಾರ: ಕಳವಳಕ್ಕೆ ಕಾರಣವಾಗಿದ್ದ ಹೋರ್ಮುಜ್ ಜಲಸಂಧಿಯಿಂದ ಈಗಾಗಲೇ 4 ಭಾರತೀಯ ನೌಕೆಗಳು ಸುರಕ್ಷಿತವಾಗಿ ಹೊರಬಂದಿವೆ.
- ಬರುತ್ತಿವೆ ಎಲ್‌ಪಿ ಜಿನೌಕೆಗಳು: ಮುಂದಿನ ಎರಡು ದಿನಗಳಲ್ಲಿ ಭಾರತದ ಪಶ್ಚಿಮ ಕರಾವಳಿಗೆ ಎರಡು ಬೃಹತ್ ಎಲ್‌ಪಿಜಿ ನೌಕೆಗಳು ತಲುಪಲಿವೆ. ಇವುಗಳಲ್ಲಿ ಸುಮಾರು 92 ಸಾವಿರ ಟನ್ ಅನಿಲ ಇರಲಿದ್ದು, ದೇಶದ ಅಡುಗೆ ಅನಿಲ ಬೇಡಿಕೆಯನ್ನು ಪೂರೈಸಲಿವೆ.
ಸರ್ಕಾರದ ನಿಲುವು:
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಸಭೆಯಲ್ಲಿ ವಿವರವಾದ ಪ್ರೆಸೆಂಟೇಶನ್ ನೀಡಿದ್ದು, ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ ಭಾರತವು ತನ್ನ ‘ರಾಷ್ಟ್ರೀಯ ಹಿತಾಸಕ್ತಿ’ಗೆ ಮೊದಲ ಆದ್ಯತೆ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಕಿವಿಮಾತು
“ಮತ್ತೆ ಲಾಕ್‌ಡೌನ್ ಆಗಲಿದೆ ಎಂಬ ವದಂತಿಗಳು ಸತ್ಯಕ್ಕೆ ದೂರವಾಗಿವೆ. ಪೆಟ್ರೋಲ್ ಮತ್ತು ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಜನರು ಆತಂಕಕ್ಕೆ ಒಳಗಾಗಿ ಮುಗಿಬಿದ್ದು ಪೆಟ್ರೋಲ್ ಅಥವಾ ಗ್ಯಾಸ್ ಸಂಗ್ರಹಿಸುವ ಅಗತ್ಯವಿಲ್ಲ.”

