ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸುವ ಮೂಲಕ ಕಾಳಜಿ ತೋರುವವರಿಗೆ ಬೆಂಬಲಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಂಡಿದೆ.
ಕಾನೂನು ಕಿರಿಕಿರಿಯ ಭೀತಿ ಇಲ್ಲದೆ ಜೀವ ರಕ್ಷಣೆ ಮಾಡುವವರನ್ನು ಹೆದ್ದಾರಿ ವೀರ(ರಹವೀರ್) ಎಂದು ಗುರುತಿಸಿ 25,000 ರೂ. ಬಹುಮಾನ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.
ಚಳಿಗಾಲದಲ್ಲಿ ರಸ್ತೆ ಅಪಘಾತಗಳು, ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಗಳು ಗಾಯಾಳುಗಳನ್ನು ರಕ್ಷಿಸಿ ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದರೆ ಅಮೂಲ್ಯ ಜೀವ ಉಳಿಯುತ್ತದೆ. ಅಂತಹ ತುರ್ತು ಸಹಾಯ ನೀಡುವವರನ್ನು ಗೌರವದಿಂದ ಕಾಣಲು ಸರ್ಕಾರ ನಿರ್ಧರಿಸಿದೆ.
ತುರ್ತು ಚಿಕಿತ್ಸೆ ಸಿಗದೇ ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತದೆ. ಇಂತಹ ನಿರ್ಲಕ್ಷ್ಯದಿಂದ ವರ್ಷಕ್ಕೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಿಕವಾಗಿ ಸಹಾಯ ದೊರೆತರೆ 50 ಸಾವಿರಕ್ಕೂ ಹೆಚ್ಚು ಜನರ ಜೀವ ಉಳಿಸಬಹುದಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ನಿತಿನ್ ಗಡ್ಕರಿ, ಅಪಘಾತದ ಸಂದರ್ಭದಲ್ಲಿ ಸಾಮೂಹಿಕ ಜವಾಬ್ದಾರಿ ತೆಗೆದುಕೊಳ್ಳುವುದು ಮುಖ್ಯ. ತುರ್ತು ನೆರವು ನೀಡುವವರಿಗೆ ಪೊಲೀಸರು ಕಿರಿಕಿರಿ ಉಂಟು ಮಾಡಬಾರದು. ಆಸ್ಪತ್ರೆಗಳು ಗಾಯಾಳುಗಳ ಬಗ್ಗೆ ತುರ್ತು ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಗಾಯಾಳು ಬಡವನೇ, ಶ್ರೀಮಂತನೇ ಎಂದು ನೋಡುವ ಬದಲು ತುರ್ತು ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದಾರೆ.
7 ದಿನ ಮೇಲ್ಪಟ್ಟು ಗಾಯಾಳು ಇರಿಸಿಕೊಂಡು ಚಿಕಿತ್ಸೆ ನೀಡಿ ಜೀವ ಉಳಿಸುವ ಆಸ್ಪತ್ರೆಗೆ ಸರ್ಕಾರ 1.5 ಲಕ್ಷ ರೂ. ನೀಡಲಿದೆ ಎಂದು ಹೇಳಿದ್ದಾರೆ.

