ಐಪಿಎಲ್ 2026ರ ಭಾನುವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 54 ರನ್ ಗಳ ಅಮೋಘ ಜಯ ಸಾಧಿಸಿದೆ. ಆದರೆ ಈ ಗೆಲುವಿನ ಸಂಭ್ರಮದ ನಡುವೆಯೂ ಪಂಜಾಬ್ ತಂಡದ ಫೀಲ್ಡಿಂಗ್ ವೈಫಲ್ಯವು ಚರ್ಚೆಗೆ ಕಾರಣವಾಗಿದೆ. ತಂಡದ ಪ್ರಮುಖ ಆಟಗಾರ ಶಶಾಂಕ್ ಸಿಂಗ್ ಒಂದೇ ಪಂದ್ಯದಲ್ಲಿ ಮೂರು ಸುಲಭ ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ಮೈದಾನದಲ್ಲಿ ಮುಜುಗರ ಅನುಭವಿಸಿದರು.
ಶಶಾಂಕ್ ಎಡವಟ್ಟು ಮತ್ತು ಪಾಂಟಿಂಗ್ ಪ್ರತಿಕ್ರಿಯೆ ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಶಶಾಂಕ್ ಸಿಂಗ್ ಮಾಡಿದ ತಪ್ಪುಗಳು ತಂಡದ ಮ್ಯಾನೇಜ್ ಮೆಂಟ್ ಮೇಲೆ ಪ್ರಭಾವ ಬೀರಿದವು. 14ನೇ ಓವರ್ ನಲ್ಲಿ ಚಹಾಲ್ ಎಸೆತದಲ್ಲಿ ನಿಕೋಲಸ್ ಪೂರನ್ ನೀಡಿದ ಕ್ಯಾಚ್ ಅನ್ನು ಶಶಾಂಕ್ ಮೊದಲ ಬಾರಿಗೆ ಕೈಬಿಟ್ಟರು. ಬಳಿಕ 18ನೇ ಓವರ್ ನಲ್ಲಿ ಏಡನ್ ಮಾರ್ಕ್ರಾಮ್ ಹೊಡೆದ ಚೆಂಡನ್ನು ಜಡ್ಜ್ ಮಾಡುವಲ್ಲಿ ವಿಫಲರಾಗಿ ಎರಡನೇ ಜೀವದಾನ ನೀಡಿದರು. ಈ ವೇಳೆ ಡಗೌಟ್ ನಲ್ಲಿದ್ದ ಕೋಚ್ ರಿಕಿ ಪಾಂಟಿಂಗ್ ಅವರ ಮುಖದಲ್ಲಿ ಅಚ್ಚರಿ ಮತ್ತು ಅಸಮಾಧಾನ ಎದ್ದುಕಾಣುತ್ತಿತ್ತು.
ಇಷ್ಟಕ್ಕೇ ನಿಲ್ಲದ ಫೀಲ್ಡಿಂಗ್ ಪ್ರಮಾದ 19ನೇ ಓವರ್ ನಲ್ಲಿ ಮುಂದುವರಿಯಿತು. ಮುಕುಲ್ ಚೌಧರಿ ನೀಡಿದ ಕ್ಯಾಚ್ ಅನ್ನು ಹಿಡಿಯುವಲ್ಲಿ ಶಶಾಂಕ್ ಮತ್ತೆ ವಿಫಲರಾದರು. ಇದನ್ನು ಕಂಡು ನಾಯಕ ಶ್ರೇಯಸ್ ಅಯ್ಯರ್ ಮಂದಸ್ಮಿತರಾದರೆ, ಪಾಂಟಿಂಗ್ ಮಾತ್ರ ಗಂಭೀರವಾಗಿ ಕಾಣಿಸಿಕೊಂಡರು. ಆದರೆ ಪಂದ್ಯ ಮುಗಿದ ನಂತರ ಎಲ್ಲವೂ ತಿಳಿಯಾಯಿತು. ಪಂದ್ಯದ ಬಳಿಕ ನಡೆದ ಹಸ್ತಲಾಘವದ ಸಮಯದಲ್ಲಿ ಪಾಂಟಿಂಗ್ ಮತ್ತು ಅಯ್ಯರ್ ಇಬ್ಬರೂ ಶಶಾಂಕ್ ರನ್ನು ತಬ್ಬಿಕೊಂಡು ಸಮಾಧಾನಪಡಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.
ಪಂಜಾಬ್ ದಾಖಲೆಯ ಮೊತ್ತ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಪ್ರಿಯಾಂಶ್ ಆರ್ಯ ಅವರ ಭರ್ಜರಿ 93 ರನ್ ಮತ್ತು ಕೂಪರ್ ಕೊನೊಲಿ ಅವರ 87 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಇದು ಪ್ರಸಕ್ತ ಐಪಿಎಲ್ ಆವೃತ್ತಿಯ ಗರಿಷ್ಠ ಮೊತ್ತವಾಗಿದೆ. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ತಂಡ ರಿಷಬ್ ಪಂತ್, ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಅವರ ಹೋರಾಟದ ನಡುವೆಯೂ ಸೋಲೊಪ್ಪಿಕೊಂಡಿತು.

