ಕೋಲ್ಕತ್ತಾ: ಕೋಲ್ಕತ್ತಾ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಪಶ್ಚಿಮ ಬಂಗಾಳ ನೂತನ ಮುಖ್ಯಮಂತ್ರಿ ಸುವೆಂದು ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ-ಕೊಲೆ ಪ್ರಕರಣದ ತನಿಖೆಯ ಆರಂಭಿಕ ಹಂತದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸಚಿವಾಲಯದಲ್ಲಿ ನಿರ್ಧಾರ ಪ್ರಕಟಿಸಿದ ಸಿಎಂ ಸುವೆಂದು ಅಧಿಕಾರಿ, ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮತ್ತು ಮಾಜಿ ಉಪ ಆಯುಕ್ತರಾದ ಇಂದಿರಾ ಮುಖರ್ಜಿ ಮತ್ತು ಅಭಿಷೇಕ್ ಗುಪ್ತಾ ಅವರನ್ನು ಅಮಾನತುಗೊಳಿಸಲು ಆದೇಶಿಸಲಾಗಿದೆ ಎಂದು ಹೇಳಿದರು.
ಈ ಮೂವರು ಅಧಿಕಾರಿಗಳು ಪ್ರಕರಣ ಮಿಸ್ ಹ್ಯಾಂಡಿಂಗ್ ಮಾಡಿದ್ದಾರೆ ಹಾಗೂ ಸಂತ್ರಸ್ತರ ಪೋಷಕರಿಗೆ ಹಣದ ಆಮಿಷವೊಡ್ದುತ್ತಿದ್ದಾರೆ” ಮತ್ತು ಆಗಸ್ಟ್, 2024 ರಲ್ಲಿ ನಡೆದ ಈ ಭೀಕರ ಅಪರಾಧಕ್ಕೆ ಸಂಬಂಧಿಸಿದಂತೆ “ಅನಧಿಕೃತ ಪತ್ರಿಕಾಗೋಷ್ಠಿ”ಯನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂಬ ಆರೋಪಗಳು ಇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಮುಖ್ಯ ಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ಶಿಸ್ತು ಕ್ರಮಗಳು ಮತ್ತು ಇಲಾಖಾ ತನಿಖೆಯನ್ನು ರಾಜ್ಯ ಗೃಹ ಕಾರ್ಯದರ್ಶಿಯವರು ಮುನ್ನಡೆಸುತ್ತಾರೆ ಎಂದು ಹೇಳಿದರು.

