ತುಮಕೂರು: ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ RFO ಕೆ.ಎಸ್. ಸತೀಶ್ ಚಂದ್ರ ಲೋಕಾಯುಕ್ತ ಬಲೆಗೆ ಬಿದ್ದವರು.
ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗೆ ಲಂಚ ಸ್ವೀಕರಿಸುತ್ತಿದ್ದರು. ಮಂಡ್ಯ ಮೂಲದ ಗುತ್ತಿಗೆದಾರ ಶಿವರಾಜು ಅವರಿಂದ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ. ಹೊರಗುತ್ತಿಗೆ ನೌಕರ ಶೌಕತ್ ಮೂಲಕ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಸತೀಶ್ ಚಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅರಣ್ಯ ಮತ್ತು ಸಿವಿಲ್ ಗುತ್ತಿಗೆದಾರ ಶಿವರಾಜು ದೂರಿನ ಅನ್ವಯ ದಾಳಿ ನಡೆಸಲಾಗಿದೆ. ಟೆಂಡರ್ ಕಾರ್ಯಾದೇಶದಂತೆ ಕೆಲಸ ಮಾಡಲು ತೆರಳಿದ್ದಾಗ ಆರ್.ಎಫ್ಒ. ಸತೀಶ್ ಚಂದ್ರ ತಡೆದಿದ್ದರು. ಕಾಮಗಾರಿಗೆ ಮಂಜೂರಾದ ಮೊತ್ತದಲ್ಲಿ ಶೇಕಡ 30ರಷ್ಟು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 3 ಲಕ್ಷ ರೂಪಾಯಿ ಲಂಚ ನೀಡಿದ ನಂತರ ಕೆಲಸ ಶುರು ಮಾಡುವಂತೆ ಮಾಡಿದ್ದರು. ಮೊದಲ ಕಂತಿನಲ್ಲಿ 50 ಸಾವಿರ ರೂ. ಲಂಚ ಪಡೆದುಕೊಂಡಿದ್ದರು.
ಉಳಿದ 2.50 ಲಕ್ಷ ರೂ. ಲಂಚದ ಹಣಕ್ಕಾಗಿ ಸತೀಶ ಚಂದ್ರ ಪೀಡಿಸುತ್ತಿದ್ದರು. ಅವರ ಕಿರುಕುಳ ಹೆಚ್ಚಾಗಿದ್ದರಿಂದ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು. ಗುಬ್ಬಿ ವಲಯ ಅರಣ್ಯ ಅಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಕ್ಯಾಂಪ್ ವಾಚರ್ ಶೌಕತ್ ಬಲೆಗೆ ಬಿದ್ದಿದ್ದಾರೆ. ಸತೀಶ್ ಚಂದ್ರ ಸೂಚನೆ ಮೇರೆಗೆ ಅವರು ಲಂಚದ ಹಣ ಸ್ವೀಕರಿಸಿದ್ದರು. ಸತೀಶ್ ಚಂದ್ರ ಮತ್ತು ಶೌಕತ್ ನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಶಿವಮೊಗ್ಗ: ಸರ್ಕಾರದ ನಿರ್ದೇಶನದಂತೆ ದಿನಾಂಕ 15-09-2026 ರಂದು ಯುವ ಸಂಸತ್ತು ಸಭೆಗೆ ಚಾಲನೆ ನೀಡುವ ಮೂಲಕ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಶಿವಮೊಗ್ಗ ಇವರ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮವು ದಿನಾಂಕ: 15-09-2026 ರ ಬೆಳಿಗ್ಗೆ 10:00 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನ, ಶಿವಮೊಗ್ಗ ಇಲ್ಲಿ ನಡೆಯಲಿದೆ.
ಈ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಇಲಾಖೆಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕೋರಿದ್ದಾರೆ.
ವಿಶ್ವ ಕೌಶಲ್ಯ ಸ್ಪರ್ಧೆ-2026
ಶಿವಮೊಗ್ಗ: ವಿಶ್ವ ಕೌಶಲ್ಯ ಸ್ಪರ್ಧೆ-2026 ಹಾಗೂ ರಾಜ್ಯದಲ್ಲಿ ನಡೆಯುವ ಇಂಡಿಯಾ ಸ್ಕಿಲ್ ಕಂಪಿಟಿಷನ್ ಕರ್ನಾಟಕ 2026 ವಿವಿಧ ಕೌಶಲ್ಯ ಸ್ಪರ್ಧೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು www.skillindiadigital.gov.in ಜಾಲತಾಣದಲ್ಲಿ ದಿ:15.09.2026 ರೊಳಗೆ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ: https://www.skillindiadigital.gov.in/home, ಸಹಾಯವಾಣಿ: 9606492216/7204237323 ಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅಶೋಕ್ ಎಸ್. ರವರು ತಿಳಿಸಿದ್ದಾರೆ.
ಮೆಸ್ಕಾಂ ಜನಸಂಪರ್ಕ ಸಭೆ
ಶಿವಮೊಗ್ಗ: ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ 11 ರಿಂದ 01 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಅಗತ್ಯ ಮಾಹಿತಿಗಾಗಿ ದೂ. ಸಂ.: 9448289520 ನ್ನು ಸಂಪರ್ಕಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

