ನಿನ್ನೆ ( ಜುಲೈ 1 ) ಡರ್ಹಮ್‌ನ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಗ್ರೌಂಡ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ಮಳೆಗೆ ಆಹುತಿಯಾಯಿತು.
ಈ ಮೂಲಕ ಸರಣಿಯ ಮೊದಲ ಪಂದ್ಯ ಫಲಿತಾಂಶವಿಲ್ಲದೇ ಮುಗಿದಿದ್ದು, ಉಳಿದ ಎರಡು ಪಂದ್ಯಗಳು ಉಭಯ ತಂಡಗಳ ಪಾಲಿಗೆ ಅತಿ ಮುಖ್ಯವಾಗಿ ಪರಿಣಮಿಸಿವೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 190 ರನ್‌ಗಳ ಗುರಿಯನ್ನು ನೀಡಿತ್ತು. ಇಂಗ್ಲೆಂಡ್ ಇನ್ನಿಂಗ್ಸ್ ಆರಂಭವಾಗುವ ಮುನ್ನ ಮಳೆ ಬಂದು ಪಂದ್ಯ ರದ್ದಾಯಿತು.
ಭಾರತದ ಪರ ಸಂಜು ಸ್ಯಾಮ್ಸನ್ 1, ಇಶಾನ್ ಕಿಶನ್ ಡಕ್‌ಔಟ್ ಆಗುವ ಮೂಲಕ ತಂಡ ಕೇವಲ 6 ರನ್‌ಗೆ ತನ್ನ ಎರಡು ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡಿತು. ಅಭಿಷೇಕ್ ಶರ್ಮಾ 59 (24), ನಾಯಕ ಶ್ರೇಯಸ್ ಐಯ್ಯರ್ 68 (47) ಹಾಗೂ ಶಿವಮ್ ದುಬೆ ಅಜೇಯ 42 (21) ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಪಂದ್ಯ ರದ್ದಾಗಿ ಫಲಿತಾಂಶ ಸಿಗದೇ ಹೋದದ್ದು ಒಂದೆಡೆ ಚರ್ಚೆಗೆ ಕಾರಣವಾದರೆ ಮತ್ತೊಂದೆಡೆ ತಂಡ ಐರ್ಲೆಂಡ್ ಸರಣಿ ಬಳಿಕ ಮತ್ತೊಮ್ಮೆ ಕಳಪೆ ಆರಂಭ ಪಡೆದುಕೊಂಡದ್ದು ಭಾರೀ ಟೀಕೆಗೆ ಕಾರಣವಾಗಿದೆ.
ಅದರಲ್ಲೂ ನೆಟ್ಟಿಗರು ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಫಾರ್ಮ್ ಪ್ರಶ್ನಿಸಿ ಕಿಡಿಕಾರಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ ಡಕ್‌ಔಟ್ ಆಗಿದ್ದರು. ಹೀಗೆ ಆ ಸರಣಿ ಪೂರ್ತಿ ಸಂಜು ವಿಫಲರಾದ ಕಾರಣ ಅವರ ಬದಲು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಕೇವಲ 1 ರನ್ ಬಾರಿಸಿ ವಿಫಲರಾದ ಸಂಜು ಬದಲಿಗೆ ವೈಭವ್‌ರನ್ನು ಕಣಕ್ಕಿಳಿಸಿ ಎಂದಿದ್ದಾರೆ. ಸತತ ಮೂರು ಪಂದ್ಯಗಳಲ್ಲಿ ಫ್ಲಾಪ್ ಆದ ಸಂಜುಗೆ ಅವಕಾಶ ಕೊಟ್ಟಿದ್ದು ಸಾಕು ಮಾಡ್ರಪ್ಪ ವೈಭವ್ ಆಡಿಸಿ ಎಂದು ಹಲವಾರು ಮಂದಿ ಪೋಸ್ಟ್ ಹಂಚಿಕೊಂಡಿದ್ದಾರೆ.

