ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾಗೌಡಳನ್ನು ಜೈಲಿನಲ್ಲಿ ಬೇರೆ ಸೆಲ್ ಗೆ ಸ್ಥಳಾಂತರಿಸಲಾಗಿದೆ.
ಇಬ್ಬರ ಬ್ಯಾರಕ್‌ನಲ್ಲಿದ್ದ ಆರೋಪಿ ಪವಿತ್ರಾಗೌಡಳನ್ನು 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ. ಈ ಮೂಲಕ ಪವಿತ್ರಗೌಡಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಶಾಕ್ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ಕೋರ್ಟ್‌ನಲ್ಲಿದೆ. ಟ್ರಯಲ್ ನಡೆಯುವಾಗ ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರಾಗಬೇಕು. ಕಳೆದ ಮೂರು ದಿನಗಳ ಹಿಂದೆ ಎಲ್ಲಾ ಆರೋಪಿಗಳು ಹಾಜರಾದ ಬಳಿಕ ತಡವಾಗಿ ಪವಿತ್ರಾಗೌಡ ಹಾಜರಾಗಿದ್ದಲ್ಲದೇ, ಹೆಡ್ ಫೋನ್ ಧರಿಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದರು.
ವಿಚಾರಣೆ ವೇಳೆ ಹೆಡ್ ಫೋನ್ ಗೆ ಅವಕಾಶವಿಲ್ಲದಿದ್ದರೂ ಹೆಡ್ ಫೋನ್ ಬಳಸಿದ್ದಕ್ಕೆ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದರು.ಈ ಬಗ್ಗೆ ಜೈಲು ಅಧಿಕಾರಿಗಳಿಂದ ನ್ಯಾಯಾಧೀಶರು ಸ್ಪಷ್ಟನೆ ಕೇಳಿದ್ದರು. ಪವಿತ್ರಾಗೌಡಗೆ ಜೈಲಿನಲ್ಲಿ ಕೆಲ ಸವಲತ್ತುಗಳು ಸಿಗುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಕೇಳಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪವಿತ್ರಾಗೌಡರನ್ನು ಬೇರೆ ಸೆಲ್ ಗೆ ಸ್ಥಳಾಂತರಿಸಲಾಗಿದೆ.

