ವೃತ್ತಿಯಲ್ಲಿ ಬಿಹಾರ ಪೊಲೀಸ್ ಇಲಾಖೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಆಗಿರುವ ಪ್ರಿಯಾಂಕಾ ಗುಪ್ತಾ, ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುವುದನ್ನು ಹವ್ಯಾಸವಾಗಿರಿಸಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ 12,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಆದರೆ, ಕರ್ತವ್ಯದ ವೇಳೆ ರೀಲ್ಸ್ ಮಾಡುವ ಅಭ್ಯಾಸವು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಪೂರ್ವ ಚಂಪಾರಣ್ ಜಿಲ್ಲೆಯ ಪಹರ್‌ಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಪ್ರಿಯಾಂಕಾ ಗುಪ್ತಾ ಅವರನ್ನು ಕರ್ತವ್ಯದ ವೇಳೆ ರೀಲ್ಸ್ ಮಾಡಿದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ. ಈ ಸುದ್ದಿಯನ್ನು ಎಸ್ಪಿ ಸ್ವರ್ಣ ಪ್ರಭಾತ್ ಗುರುವಾರ ದೃಢಪಡಿಸಿದ್ದಾರೆ.
ಕೆಲಸದ ಸಮಯದಲ್ಲಿ ಪ್ರಿಯಾಂಕಾ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ರೀಲ್ಸ್ ಮಾಡಲು ಪ್ರಾರಂಭಿಸುತ್ತಿದ್ದರು. ನಂತರ ಈ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದರು ಎಂದು ಸ್ಥಳೀಯರು ದೂರು ನೀಡಿದ್ದರು. ಹಿಂದಿ ಚಲನಚಿತ್ರ ಗೀತೆಗಳಿಗೆ ಮಾಡಿದ ಅವರ ಕೆಲವು ರೀಲ್ಸ್‌ಗಳು ವೈರಲ್ ಆಗಿದ್ದವು. ವಾಹನದಲ್ಲಿ ಕುಳಿತಿರುವಾಗ ಮತ್ತು ತಪಾಸಣೆ ವೇಳೆ ರೀಲ್ಸ್ ಮಾಡಿದ್ದರು.
ಪೂರ್ವ ಚಂಪಾರಣ್ ಎಸ್ಪಿ ಸ್ವರ್ಣ ಪ್ರಭಾತ್, “ತಪಾಸಣೆಯ ಸಮಯದಲ್ಲಿ ಪ್ರಿಯಾಂಕಾ ಗುಪ್ತಾ ರೀಲ್ಸ್ ಮಾಡಿದ್ದಾರೆ ಎಂಬ ಆರೋಪಗಳಿವೆ. ಇದು ಶಿಸ್ತಿನ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಪೊಲೀಸ್ ಪಡೆಯ ಚಿತ್ರಣವನ್ನು ಹಾಳು ಮಾಡಿದೆ” ಎಂದು ಹೇಳಿದ್ದಾರೆ. ತನಿಖೆಯ ನಂತರ ಪ್ರಿಯಾಂಕಾ ಅವರನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯದ ಸಮಯದಲ್ಲಿ ಸಾಮಾಜಿಕ ಮಾಧ್ಯಮದಿಂದ ದೂರವಿರಲು ಬಿಹಾರ ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಬಿಹಾರ ಪೊಲೀಸ್ ಪ್ರಧಾನ ಕಛೇರಿಯು ಪೊಲೀಸ್ ಸಿಬ್ಬಂದಿ ಸಮವಸ್ತ್ರದಲ್ಲಿರುವಾಗ ರೀಲ್ಸ್ ಮಾಡುವುದನ್ನು ನಿಷೇಧಿಸಿದೆ. ಕರ್ತವ್ಯದ ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುವುದರ ಮೇಲೂ ನಿರ್ಬಂಧಗಳಿವೆ.
ಪ್ರಿಯಾಂಕಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ಅವರು ನಿಯಮಿತವಾಗಿ ರೀಲ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದರು ಮತ್ತು ಪ್ರತಿಯೊಂದು ವೀಡಿಯೊಗಳು ಸಾವಿರಾರು ವೀಕ್ಷಣೆಗಳನ್ನು ಪಡೆಯುತ್ತಿದ್ದವು.