ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿಕೆಟ್ಟ ಪ್ರದರ್ಶನ ತೋರಿದ ತಂಡ ಯಾವುದೆಂದರೆ ಅದು ಲಕ್ನೋ ಸೂಪರ್ ಜೈಂಟ್ಸ್ ಎಂಬುದು ಪ್ರತಿಯೊಬ್ಬರ ಅಭಿಪ್ರಾಯ. ಹಾಗೆಯೇ ತಂಡ ಅಷ್ಟು ಹೀನಾಯ ಪ್ರದರ್ಶನ ನೀಡಿದ್ದಕ್ಕೆ ಕಾರಣ ಸಹ ನಾಯಕ ರಿಷಭ್ ಪಂತ್ ಎಂಬುದು ಬಹು ಜನರ ವಾದ.
ಪಂತ್ ಈ ಬಾರಿ ನಾಯಕತ್ವ ನಿಭಾಯಿಸಿದ್ದು ಸಹ ಈ ರೀತಿಯ ಕೆಟ್ಟ ವಿಮರ್ಶೆ ಪಡೆದುಕೊಳ್ಳುವ ಮಟ್ಟಕ್ಕೇ ಇದೆ. ಇನ್ನು ಹೀಗೆ ಟೂರ್ನಿಯಲ್ಲಿ ಆಡಿದ 13 ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಮಾತ್ರ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಹೀನಾಯ ಪ್ರದರ್ಶನ ನೀಡಿರುವ ಪಂತ್ ಕುರಿತು ರೆಡಿಟ್‌ನಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದ್ದು, ಆತನೊಬ್ಬ ಮೊಂಡ ಕ್ರಿಕೆಟಿಗ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಕೀ ಎಸ್ಕೇಪ್ 5460 ( Key_Escape_5460 ) ಎಂಬ ಬಳಕೆದಾರ ತಾನು ಲಕ್ನೋ ಸೂಪರ್ ಜೈಂಟ್ಸ್ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡುವ ಅದೃಷ್ಟ ಸಿಕ್ಕಿತು ಎಂದು ಬರೆದುಕೊಂಡಿದ್ದು, ತಂಡದ ನಾಯಕ ರಿಷಭ್ ಪಂತ್ ಓರ್ವ ಮೊಂಡ, ಹುಚ್ಚನ ಥರ ಆಡುತ್ತಾನೆ, ತಂಡದ ಕೋಚ್ ವಿರುದ್ಧವೇ ಮಾತನಾಡುತ್ತಾನೆ ಎಂದು ಬರೆದುಕೊಂಡು ಆರೋಪ ಮಾಡಿದ್ದಾರೆ.
ಅಲ್ಲದೇ ಸ್ವಲ್ಪ ಹೊತ್ತು ಚೆನ್ನಾಗಿಯೇ ಮಾತನಾಡುವ ಪಂತ್ ಇದ್ದಕ್ಕಿದ್ದ ಹಾಗೆ ಚೆನ್ನಾಗಿ ಮಾತನಾಡುತ್ತಿದ್ದವರ ಜತೆಯೇ ಅತಿರೇಕವಾಗಿ ವರ್ತಿಸಿಬಿಡ್ತಾರೆ ಎಂದಿದ್ದಾರೆ. ಹುಚ್ಚನಂತೆ ಮೊಬೈಲ್ ಎಸೆಯುವ ಪಂತ್ ಯುವ ಆಟಗಾರರನ್ನು ಸಿಕ್ಕಾಪಟ್ಟೆ ಕೀಟಲೆ ಮಾಡುತ್ತಾರೆ, ಆದರೆ ಅದಕ್ಕೆ ಮಿತಿ ಇಲ್ಲ ಹಲವಾರು ಬಾರಿ ಅದು ಅತಿರೇಕಕ್ಕೆ ತಿರುಗಿದ್ದೇ ಹೆಚ್ಚು ಎಂದು ಉಲ್ಲೇಖಿಸಿದ್ದಾರೆ.
ಇನ್ನು ಕೆಕೆಆರ್ ವಿರುದ್ಧದ ಪಂದ್ಯದ ಸೂಪರ್ ಓವರ್‌ಗೆ ನಿಕೋಲಸ್ ಪೂರನ್ ಅವರನ್ನು ಕಳುಹಿಸುವ ನಿರ್ಧಾರ ಮಾಡಿದ್ದು ಪಂತ್ ಮಾತ್ರ ಎಂದು ಉಲ್ಲೇಖಿಸಿರುವ ಇವರು ಕೆಕೆಆರ್ ವಿರುದ್ಧ ಅಬ್ಬರಿಸಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದ ಯುವ ಕ್ರಿಕೆಟಿಗ ಮುಕುಲ್ ಚೌಧರಿಯನ್ನು ಮುಂದಿನ ಪಂದ್ಯದಿಂದ ಕೈಬಿಡಬೇಕೆಂದು ಪಟ್ಟುಹಿಡಿದಿದ್ದ ಎಂದೂ ಸಹ ಉಲ್ಲೇಖಿಸಲಾಗಿದೆ.
ಚೆನ್ನಾಗಿ ಆಡಿದ ಆಟಗಾರನನ್ನು ಕೈಬಿಡಲು ಆಗಲ್ಲ ಎಂದು ಮ್ಯಾನೇಜ್‌ಮೆಂಟ್ ತಿಳಿಸಿದಾಗ ಕೆಲ ಪಂದ್ಯ ಕಾದು ಆತ ರನ್ ಗಳಿಸದಿದ್ದಾಗ ನೋಡಿ ಆತನಿಗೆ ಒತ್ತಡ ನಿಭಾಯಿಸಲು ಬರುತ್ತಿಲ್ಲ ತೆಗೆದುಹಾಕಿ ಎಂದು ತಂಡದಿಂದಲೇ ಹೊರಹಾಕಿದ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ಹೀಗೆ ತಲೆ ಇಲ್ಲದ ಮನುಷ್ಯನ ಕೈಗೆ ಲಕ್ನೋ ನಾಯಕತ್ವ ಕೊಟ್ಟಿರುವುದು ಅದರ ದುರಾದೃಷ್ಟ, ತಂಡಕ್ಕೆ ಇನ್ನೂ ಉತ್ತಮ ನಾಯಕನ ಅಗತ್ಯವಿದೆ, ತಂಡದ ಅಭಿಮಾನಿಗಳಿಗೆ ಇನ್ನೂ ಒಳ್ಳೆಯ ನಾಯಕ ಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ರೆಡ್‌ಇಟ್‌ನ ಈ ಪೋಸ್ಟ್ ಭಾರೀ ಸದ್ದು ಮಾಡುತ್ತಿದ್ದು, ಪಂತ್ ವ್ಯಕ್ತಿತ್ವ ಅಂಥದ್ದಾ ಎಂಬ ಪ್ರಶ್ನೆ ಮೂಡಿದೆ. ಅದೂ ಅಲ್ಲದೇ ಸಿಬ್ಬಂದಿ ವರ್ಗದವನಾಗಿ ಕೆಲಸ ಮಾಡಿದ್ದೆ ಎಂದು ಪೋಸ್ಟ್ ಹಂಚಿಕೊಂಡಿರುವ ವ್ಯಕ್ತಿ ಹೇಳಿಕೊಂಡಿರುವ ಕಾರಣ ಈ ಪೋಸ್ಟ್ ಭಾರೀ ಚರ್ಚೆ ಹುಟ್ಟುಹಾಕಿದೆ.

