ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ ಕಿಡ್ನ್ಯಾಪ್ ಆಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ತಮಿಳುನಾಡಿನ ಡಂಕಣಿಕೋಟೆ ಬಳಿ ಹತ್ಯೆಯಾಗಿದ್ದು, ಅವರ ಮೃತದೇಹ ಪತ್ತೆಯಾಗಿದೆ.
ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಪತ್ತೆಗಾಗಿ ಪೊಲೀಸರ 7 ವಿಶೇಷ ತಂಡ ರಚನೆ ಮಾಡಲಾಗಿತ್ತು. ಆದರೆ ಇಂದು ಅವರ ಶವ ಡಂಕಣಿಕೋಟೆ ಬಳಿ ಪತ್ತೆಯಾಗಿದೆ.
ಮಾರ್ಚ್ ೮ರಂದು ಸಂಜೆ ದುಷ್ಕರ್ಮಿಗಳು ಗೋಪಾಲ್ ಅವರ ಕಾರನ್ನು ಅಡ್ಡಗಟ್ಟಿ ಅಪಹರಿಸಿ ಕರೆದೊಯ್ದಿದ್ದರು. ಬಳಿಕ ಅವರನ್ನು ತಮಿಳುನಾಡಿನ ಡೆಂಕಣಿಕೋಟೆ ಸಮೀಪಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಮೋಹನ್ ಬಾಬು ಎಂಬ ವ್ಯಕ್ತಿ 25 ಲಕ್ಷ ರೂಪಾಯಿ ಸುಪಾರಿ ನೀಡಿ ಗೋಪಾಲ್ ನನ್ನು ಹತ್ಯೆ ಮಾಡಿಸಿದ್ದಾನೆ ಎಂದು ತಿಳಿದುಬಂದಿದೆ. ಸುಪಾರಿ ಪಡೆದ ದುಷ್ಕರ್ಮಿಗಳು ಗೋಪಾಲ್ರನ್ನು ಕಾರಿನಲ್ಲಿ ಕರೆದೊಯ್ದು ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಸಂಬಂಧ ಮೋಹನ್ ಬಾಬು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇತರರ ಬಂಧನಕ್ಕೆ ಶೋಧಕಾರ್ಯ ಮುಂದುವರೆದಿದೆ. ಗೋಪಾಲ್ ಹತ್ಯೆಯಿಂದ ಬೆಚ್ಚಿಬಿದ್ದಿರುವ ಕುಟುಂಬದವರು ಆನೇಕಲ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಕರ್ಪೂರು ಗೇಟ್ ಬಳಿ ಗೋಪಾಲ್ ಹಾಗೂ ಸತೀಶ್ ಇದ್ದ ಕಾರಿಗೆ ದುಷ್ಕರ್ಮಿಗಳು ವಾಹನದಿಂದ ಡಿಕ್ಕಿ ಹೊಡೆದು, ನಂತರ ಅವರನ್ನು ಅಪಹರಿಸಿದ್ದರು ಎಂದು ಕುಟುಂಬದವರು ಆರೋಪಿಸಿದ್ದರು. ಕುಟುಂಬಸ್ಥರ ಶಂಕೆಯ ಮೇರೆಗೆ ಜಿಗಣಿ ಪೊಲೀಸರು ಮೋಹನ್ ಬಾಬು, ಹರೀಶ್ ಹಾಗೂ ಕಿರಣ್ ಎಂಬ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

