ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2025ರ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಆದ್ದರಿಂದ ಸದ್ಯ ಬೆಂಗಳೂರಿನಲ್ಲಿ ಯಾವುದೇ ಪಂದ್ಯಗಳು ನಡೆಯುತ್ತಿಲ್ಲ.
2026ರ ಐಪಿಎಲ್ ಪಂದ್ಯಾವಳಿಯ ಪಂದ್ಯಗಳನ್ನು ಆರ್‌ಸಿಬಿ ತವರು ನೆಲದಲ್ಲಿ ಆಡುವುದಿಲ್ಲವೇ? ಎಂಬ ಪ್ರಶ್ನೆ ಎದ್ದಿತ್ತು. ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಮಾಡಲು ಅನುಮತಿ ಕೊಟ್ಟಿತ್ತು.
ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರು ನಗರದಲ್ಲಿ ಪಂದ್ಯಗಳನ್ನು ಆಡಲು ಒಪ್ಪಿಗೆ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದಲ್ಲಿ 5, ರಾಯಪುರದಲ್ಲಿ 2 ಪಂದ್ಯಗಳನ್ನು ಆರ್‌ಸಿಬಿ ಆಡಳಿದೆ.
ಈ ಕುರಿತು ಆರ್‌ಸಿಬಿ ಫ್ರಾಂಚೈಸಿಯೇ ಅಧಿಕೃತವಾಗಿ ಹೇಳಿಕೆ ನೀಡಿದ್ದು, ಇದರಿಂದಾಗಿ ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಆರ್‌ಸಿಬಿ ಆಡಳಿತ ಮಂಡಳಿ ಜೊತೆಗೆ ನಡೆಸಿದ ಸಂಧಾನ ಸಭೆ ಸಫಲವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, “ಆರ್‌ಸಿಬಿ ತಂಡವು ಕೊನೆಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಸಮ್ಮತಿಸಿದೆ. ವೈಯಕ್ತಿಕವಾಗಿ ಇದು ನನಗೆ ನನ್ನ ಬಹುದೊಡ್ಡ ಸಾಧನೆಯಾಗಿದೆ” ಎಂದು ಹೇಳಿದ್ದಾರೆ.
ಬಿಸಿಸಿಐ ಶೀಘ್ರದಲ್ಲೇ ಐಪಿಎಸ್ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಯಾವಾಗ ಪಂದ್ಯಗಳು ನಡೆಯಲಿವೆ? ಎಂಬುದು ತಿಳಿಯಲಿದೆ. ಆರ್‌ಸಿಬಿ ಕಳೆದ ಬಾರಿ ಕಪ್ ಗೆದ್ದಿರುವ ಕಾರಣ ಮೊದಲ ಪಂದ್ಯವನ್ನು ಆಡಲಿದ್ದು, ಅದು ಬೆಂಗಳೂರಿನಲ್ಲಿಯೇ ನಡೆಯಲಿದೆ.
ಕಾಲ್ತುಳಿತ ಪ್ರಕರಣದ ಬಳಿಕ ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ನ್ಯಾ.ಮೈಕಲ್ ಡಿ.ಕುನ್ಹಾ ಆಯೋಗವು ಕ್ರೀಡಾಂಗಣದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರ ಮೇಲ್ವಿಚಾರಣೆಗೆ ಸರ್ಕಾರ ಕಾರ್ಯಪಡೆಯನ್ನು ರಚನೆ ಮಾಡಿದೆ.
ಸರ್ಕಾರ, ಕೆಎಸ್‌ಸಿಎ, ಕಾರ್ಯಪಡೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ ಬಳಿಕ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಲು ಅನುಮತಿ ನೀಡಲಾಗಿತ್ತು.
ಈಗ ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್, “ಕಳೆದ ಹಲವು ತಿಂಗಳ ಸತತ ಪರಿಶ್ರಮದಿಂದ ಮಹತ್ವದ ಬೆಳವಣಿಗೆ ನಡೆದಿದೆ. ಆರ್‌ಸಿಬಿ ಪಂದ್ಯಗಳು ತವರಿಗೆ ಮರಳಿದೆ. ಆರ್‌ಸಿಬಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5, ರಾಯಪುರದಲ್ಲಿ 2 ಪಂದ್ಯಗಳನ್ನು ಆಡಲಿದೆ” ಎಂದು ಹೇಳಿದ್ದಾರೆ.
“ಚಿನ್ನಸ್ವಾಮಿ ಸ್ಟೇಡಿಯಂ ನಮಗೆ ತವರಿಗಿಂತ ಮಿಗಿಲು. ನಮ್ಮ ತಂಡದ ನಿಜವಾದ ಆಸ್ತಿ ಇರುವುದೇ ತವರು ನೆಲದಲ್ಲಿ. ನೆಚ್ಚಿನ ತಂಡದ ಮ್ಯಾಚ್ ನೋಡುವುದು ಅಭಿಮಾನಿಗಳ ಹಕ್ಕು. ಕರ್ನಾಟಕ ಸರ್ಕಾರ, ಕೆಎಸ್‌ಸಿಎ, ಕರ್ನಾಟಕದ ಪೊಲೀಸರಿಗೆ ನಾವು ಅಭಾರಿ” ಎಂದು ತಿಳಿಸಿದ್ದಾರೆ.
ವೆಂಕಟೇಶ ಪ್ರಸಾದ್ ಮಾತನಾಡಿ, “ಪ್ರೇಕ್ಷಕರ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಆದ್ದರಿಂದ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. 13 ಹೊಸ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಮ್ಯಾಚ್ ನೋಡಲು ಬರುವವರಿಗೆ ಸಾರ್ವಜನಿಕ ಸಾರಿಗೆ ಬಳಕೆ ಮಾಡಬೇಕು ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದ್ದಾರೆ.

