ಬೆಂಗಳೂರು: ಆರ್ ಸಿಬಿ ಹಾಗೂ ಕೆ ಎಸ್ ಸಿಎಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಬ್ಬನ್ ಪಾರ್ಕ್ ನಲ್ಲಿ ನೂನಾರು ಮರಗಳಿಗೆ ಹಾನಿಯಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೊರ್ಟ್ ಮೆಟ್ಟಿಲೇರಿದೆ.
ಆರ್ ಸಿಬಿ ಸಂಭ್ರಮಾಚರಣೆಯ ವೇಳೆ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳು, ಜನರು ಕಬ್ಬನ್ ಪಾರ್ಕ್ ನಲ್ಲಿದ್ದ ಮರಗಳ ಮೇಲೆ ಹತ್ತಿ ನೆಚ್ಚಿನ ಆಟಗಾರರನ್ನು ನೋಡಲು ಮುಂದಾಗಿದ್ದರು. ಈ ವೇಳೆ ನೂರಾರು ಮರಗಳು, ಸಸಿಗಳು ಹಾನಿಯಾಗಿವೆ. ಇದರಿಂದ ಕೋತ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ಚಿನ್ನಸ್ವಾಮಿ ಸ್ಟೆಡಿಯಂ ನಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಬಲಿಯಾಗಿದ್ದರು. ಇದೇ ವೇಳೆ ಕಬ್ಬನ್ ಪಾರ್ಕ್ ಮರಗಳಿಗೂ ಹಾನಿಯಾಗಿವೆ ಎಂದು ಆರೋಪಿಸಲಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮೇಲೆ ನಡೆದ ಕಾರ್ಯಕ್ರಮದ ವೇಳೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿದ್ದರಿಂದ ವಿಧಾನಸೌಧ ಮುಂಭಾಗದ ಮರ, ಗಿಡಗಳಿಗೂ ಹಾನಿಯಾಗಿವೆ. ತೋಟಗಾರಿಕೆ ಇಲಾಖೆ ಕಬ್ಬನ್ ಪಾರ್ಕ್ ನಲ್ಲಿ ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ಲಾನ್ ನಿರ್ಮಾಣ ಮಾಡಿತ್ತು. ಈ ಲಾನ್ ಗಳು ಕೂಡ ಕಾಲ್ತುಳಿತದಲ್ಲಿ ಹಾಳಾಗಿವೆ. ಕಬ್ಬನ್ ಪಾರ್ಕ್ ನಲ್ಲಿ ಹಾನಿಯಾದರೆ ಅದಕ್ಕೆ ನೀವೇ ಹೊಣೆ ಎಂದು ಮೊದಲೇ ಆರ್ ಸಿಬಿ ಹಾಗೂ ಕೆ ಎಸ್ ಸಿಎ ಗೆ ಎಚ್ಚರಿಕೆ ನೀಡಲಾಗಿತ್ತು. ಈಗ ಕಾಲ್ತುಳಿತದಲ್ಲಿ ಹಾನಿಯಾಗಿದೆ. ಈ ನಷ್ಟವನ್ನು ಆರ್ ಸಿಬಿ ಹಾಗೂ ಕೆ ಎಸ್ ಸಿಎ ಭರಿಸಬೇಕು ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದೆ.