ರಾಯಚೂರು: ಗಣೇಶ ಮೂರ್ತಿ ತರುವಾಗ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಅತ್ತನೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ಅತ್ತನೂರಿನ ಪ್ರೇಮ್ (26) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಿಂದ ಸುಮಾರು 15 ಅಡಿ ಎತ್ತರದ ಗಣೇಶ ಮೂರ್ತಿಯನ್ನು ವಾಹನದಲ್ಲಿ ಸಿರವಾರಕ್ಕೆ ತರಲಾಗುತ್ತಿತ್ತು. ಈ ವೇಳೆ ಮೂರ್ತಿಯು ವಿದ್ಯುತ್ ತಂತಿಗೆ ಸಿಲುಕಿದೆ.
ಮೂರ್ತಿಗೆ ಸಿಲುಕಿದ ವಿದ್ಯುತ್ ತಂತಿ ತುಂಡಾಗಿ ಪ್ರೇಮ್ ಅವರ ಮೈ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದು ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಔಷಧ ಉದ್ಯಮಿ ವಿನೀತ್ ಮಿನೋಚಾ ಹತ್ಯೆ
ಕಾನ್ಪುರ: ಔಷಧ ಉದ್ಯಮಿ ವಿನೀತ್ ಮಿನೋಚಾ ಅವರ ಹತ್ಯೆ ಪ್ರಕರಣದ ತನಿಖೆ ಮುಂದುವರಿದಂತೆ, ಅವರ ಸೊಸೆ ಶಾಲು ಮತ್ತು ಹತ್ಯೆ ಆರೋಪ ಎದುರಿಸುತ್ತಿರುವ ವಿಶಾಲ್ ನಡುವೆ ನಡೆದ ವಾಟ್ಸಾಪ್ ಚಾಟ್‌ಗಳು ಪೊಲೀಸರಿಗೆ ಲಭ್ಯವಾಗಿವೆ.
ಶಾಲು ತನ್ನ ಮಾವನನ್ನು ಹತ್ಯೆ ಮಾಡಲು ಮಿನೋಚಾ ಅವರ ಮಾಜಿ ಉದ್ಯೋಗಿ ವಿಶಾಲ್‌ನನ್ನು ನೇಮಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲು ಮತ್ತು ವಿಶಾಲ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಶಾಲ್ ಪ್ರತಿದಿನ ಶಾಲುಗೆ ‘ಗುಡ್ ಮಾರ್ನಿಂಗ್’ ಮತ್ತು ‘ಗುಡ್ ನೈಟ್’ ಸಂದೇಶಗಳನ್ನು ಕಳುಹಿಸುತ್ತಿದ್ದ. ಆದರೆ ಶಾಲು ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಹತ್ಯೆಗೂ ಸುಮಾರು ಮೂರು ತಿಂಗಳ ಮೊದಲು ಆಕೆ ವಿಶಾಲ್‌ನೊಂದಿಗೆ ಸಂಭಾಷಣೆ ಆರಂಭಿಸಿದ್ದಳು.
ವಿಶಾಲ್‌ನ ನೋಟವನ್ನು ಹೊಗಳುತ್ತಿದ್ದ ಶಾಲು, ಆತ ಸ್ಮಾರ್ಟ್ ಆಗಿದ್ದಾನೆ ಎಂದು ಹೇಳಿದ್ದಳು. ಅಲ್ಲದೆ, “ನೀವು ಯಾರೊಂದಿಗಾದರೂ ಸಂಬಂಧದಲ್ಲಿದ್ದೀರಾ? ಇನ್ನೂ ಏಕೆ ಮದುವೆಯಾಗಿಲ್ಲ?” ಎಂದು ಪ್ರಶ್ನಿಸಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶಾಲ್ ತನ್ನ ವಾಟ್ಸಾಪ್ ಚಾಟ್ ಇತಿಹಾಸವನ್ನು ಅಳಿಸಿದ್ದ. ಆದರೆ ಕರೆಗಳ ದಾಖಲೆಗಳನ್ನು ಅಳಿಸಲು ಸಾಧ್ಯವಾಗಿರಲಿಲ್ಲ. ಇದೇ ದಾಖಲೆಗಳ ಆಧಾರದ ಮೇಲೆ ಪೊಲೀಸರು ಇಬ್ಬರ ನಡುವಿನ ಸಂಪರ್ಕವನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರ ತನಿಖೆಯಲ್ಲಿ ಮೇ 1ರಿಂದ ಹತ್ಯೆ ನಡೆದ ದಿನದವರೆಗೆ ಶಾಲು ಮತ್ತು ವಿಶಾಲ್ ನಡುವೆ 300ಕ್ಕೂ ಹೆಚ್ಚು ಕರೆಗಳು ಮತ್ತು ಸಂದೇಶಗಳು ವಿನಿಮಯವಾಗಿರುವುದು ಬೆಳಕಿಗೆ ಬಂದಿದೆ.
ಜೀವನಶೈಲಿಗೆ ವಿಧಿಸಿದ್ದ ನಿರ್ಬಂಧಗಳಿಂದ ಅಸಮಾಧಾನ?
ಶಾಲು ತನ್ನ ಜೀವನಶೈಲಿಗೆ ಮಾವ ವಿನೀತ್ ಮಿನೋಚಾ ವಿಧಿಸಿದ್ದ ಕೆಲವು ನಿರ್ಬಂಧಗಳಿಂದ ಅಸಮಾಧಾನಗೊಂಡಿದ್ದಳು. ಇದೇ ಕಾರಣಕ್ಕೆ ಆಕೆ ಮಾವನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಶನಿವಾರ ವಿಶಾಲ್, ಮಿನೋಚಾ ಅವರಿಗೆ 26 ಬಾರಿ ಚಾಕುವಿನಿಂದ ಇರಿದಿದ್ದು, ಇದರಿಂದ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ವಿಶಾಲ್ ಹಾಗೂ ಆತನ ಸಹಚರ ರಾಜ್ ಕಿಶೋರ್ (30) ಅವರನ್ನು ಬಂಧಿಸಲಾಗಿದೆ.
ವಿಶಾಲ್ ಮತ್ತು ರಾಜ್ ಕಿಶೋರ್ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ. ಭದ್ರತಾ ಸಿಬ್ಬಂದಿಯ ಪ್ರಕಾರ, ಶಾಲು ಅವರಿಬ್ಬರಿಗೂ ವಸತಿ ಸಂಕೀರ್ಣದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಳು.
ಮನೆಗೆ ಮರಳಿದ ಬಳಿಕ ಶಾಲುಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾವನ ಮೃತದೇಹವನ್ನು ಕಂಡ ಬಳಿಕ ಆಕೆ ಅತ್ತಿದ್ದಲ್ಲದೆ, ಪ್ರಜ್ಞೆ ತಪ್ಪಿದಂತೆ ನಟಿಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.
ಇದೇ ವೇಳೆ ಕಾನ್ಪುರದ ಕೇಶವಪುರಂ ಪ್ರದೇಶದಲ್ಲಿ ಈ ತಿಂಗಳ ಆರಂಭದಲ್ಲಿ 58 ವರ್ಷದ ಮಹಿಳೆಯೊಬ್ಬರು ದರೋಡೆ ವೇಳೆ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿಯೂ ಆರೋಪಿಗಳು ಮನೆಯ ಬಗ್ಗೆ ಪರಿಚಯ ಹೊಂದಿದ್ದಿರಬಹುದು ಹಾಗೂ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಎಲ್ಲಿ ಇಡಲಾಗುತ್ತದೆ ಎಂಬ ಮಾಹಿತಿ ಮೊದಲೇ ತಿಳಿದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, ಉಮಾ ಎಂಬ ಮಹಿಳೆಯ ಮೃತದೇಹವು ಮನೆಯೊಳಗೆ ಕುರ್ಚಿಯ ಮೇಲೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕುತ್ತಿಗೆಯಲ್ಲಿ ಗಾಯದ ಗುರುತು ಕಂಡುಬಂದಿತ್ತು. ಮನೆಯ ವಿವಿಧ ಭಾಗಗಳಲ್ಲಿ ಆಕೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದರಿಂದ ಬೆಲೆಬಾಳುವ ವಸ್ತುಗಳಿಗಾಗಿ ಮನೆಯಲ್ಲಿ ಹುಡುಕಾಟ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದರು.
ಆದರೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡಕ್ಕೆ ಮನೆಯೊಳಗೆ ಬಲವಂತವಾಗಿ ಪ್ರವೇಶಿಸಿರುವ ಯಾವುದೇ ಸ್ಪಷ್ಟ ಗುರುತುಗಳು ಕಂಡುಬಂದಿಲ್ಲ. ಹೀಗಾಗಿ ಆರೋಪಿಗಳು ಕುಟುಂಬಕ್ಕೆ ಪರಿಚಿತರಾಗಿರಬಹುದು ಅಥವಾ ಮನೆಯ ಹಾಗೂ ಅಲ್ಲಿದ್ದವರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದ್ದಿರಬಹುದು ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ.

