HomeLatest Newsಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 1.5 ಲಕ್ಷ ರೂ. ದಂಡ ಸಹಿತ 20 ವರ್ಷಗಳ ಜೈಲು...

ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 1.5 ಲಕ್ಷ ರೂ. ದಂಡ ಸಹಿತ 20 ವರ್ಷಗಳ ಜೈಲು ಶಿಕ್ಷೆ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ) ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಫೆಬ್ರವರಿ 5 ರಂದು ತೀರ್ಪು ಪ್ರಕಟಿಸಿದ್ದಾರೆ.

ಯಲಬುರ್ಗಾ ತಾಲ್ಲೂಕಿನ ಉಪ್ಪಲದಿನ್ನಿ ಸೀಮಾದ ಹೊಲದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಪೋಷಕರೊಂದಿಗೆ ಬಾಧಿತಳು ವಾಸವಾಗಿದ್ದಳು. ಬಾಧಿತಳ ತಾಯಿ ಹುಣಸಿಹಾಳ ಗ್ರಾಮದ ಯಮನಪ್ಪ ಭಜಂತ್ರಿ ಎಂಬ ವ್ಯಕ್ತಿಯನ್ನು ತಮ್ಮ ಗೂಡ್ಸ್ ವಾಹನ ಚಾಲನೆಗಾಗಿ ನೇಮಿಸಿಕೊಂಡಿದ್ದರು. ಯಮನಪ್ಪ ಭಜಂತ್ರಿಯು ಬಾಧಿತಳನ್ನು ಪರಿಚಯಿಸಿಕೊಂಡು, ಆಕೆಯೊಡನೆ ಸಲಿಗೆ ಬೆಳೆಸಿಕೊಂಡು ಪ್ರೀತಿಸುವುದಾಗಿ ಹೇಳಿ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಈ ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನೂ ಹಾಕಿದ್ದ.

ಬಾಧಿತಳು ಯಲಬುರ್ಗಾದ ಹಾಸ್ಟೆಲ್‌ ನಲ್ಲಿದ್ದುಕೊಂಡು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವೇಳೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಯಲಬುರ್ಗಾದ ಸರ್ಕಾರಿ ಆಸ್ಪತ್ರೆಗೆ ಹೋದಾಗ ಬಾಧಿತಳು ಗರ್ಭಿಣಿಯಾಗಿದ್ದು, ಹೊಟ್ಟೆನೋವಿನಿಂದ ಗರ್ಭಪಾತವಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಬಾಧಿತಳ ತಾಯಿ ಬೇವೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಬೇವೂರು ಪೊಲೀಸ್ ಠಾಣೆ ಪಿಎಸ್‌ಐ ಪ್ರಶಾಂತ ಎಚ್.ಎಸ್ ಅವರು ಪ್ರಥಮ ಹಂತದ ತನಿಖೆ ನಿರ್ವಹಿಸಿದ್ದರು. ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಅವರು ಮುಂದಿನ ಹಂತದ ತನಿಖೆ ನಡೆಸಿದ್ದು, ತನಿಖೆಯಲ್ಲಿ ಆರೋಪಿಯ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೋ) ಸಂ: 55/2024 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿತನ ಮೇಲಿನ ಆರೊಪಗಳು ಸಾಬೀತಾಗಿವೆ ಎಂದು ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ. ದಂಡವನ್ನು ಭರಿಸುವಂತೆ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು. ಬೇವೂರು ಠಾಣೆ ಸಿಬ್ಬಂದಿ ಷಣ್ಮುಖಪ್ಪ ಮತ್ತು ಮಂಜುನಾಥ ಸಾಕ್ಷದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದಾರೆ ಎಂದು ಹೆಚ್ಚವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರು(ಪೋಕ್ಸೋ) ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular