ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಆರ್.ಎಸ್. ದೊಡ್ಡಿ ಗ್ರಾಮದ ಬಳಿ ತಡರಾತ್ರಿ ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೊಪ್ಪ ಗ್ರಾಮದ ರಮೇಶ್, ಸುರೇಶ್, ಮುನಿಯಪ್ಪ ಮೃತಪಟ್ಟವರು ಎಂದು ಹೇಳಲಾಗಿದೆ. ಬೈಕ್ ನಲ್ಲಿ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ಬಳಿಕ ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಬ್ಬದ ವೇಳೆ ಖಾಸಗಿ ಬಸ್ ಗಳ ಸುಲಿಗೆಗೆ ಬ್ರೇಕ್: ನಿಯಮ ಉಲ್ಲಂಘಿಸಿದ ವಾಹನಗಳ ಜಪ್ತಿಗೆ ಆದೇಶ
ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುವ ಖಾಸಗಿ ಬಸ್ ಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದ್ದು, ಸೆ.11 ರಿಂದ 15ರವರೆಗೆ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಿದೆ.
ಪ್ರತಿ ಬಾರಿ ಹಬ್ಬ ಸಾಲು ಸಾಲು ರಜೆ ಸಂದರ್ಭದಲ್ಲಿ ಖಾಸಗಿ ಬಸ್ ಸೇರಿ ಇನ್ನಿತರ ಸಾರ್ವಜನಿಕ ಸೇವೆ ನೀಡುವ ವಾಹನಗಳು ಪ್ರಯಾಣಿಕರಿಂದ ನಿಗದಿಗಿಂತ ಎರಡು ಮೂರು ಪಟ್ಟು ಹೆಚ್ಚಿನ ಪ್ರಯಾಣ ದರ ವಸೂಲಿ ಮಾಡುತ್ತವೆ. ದರ ಏರಿಕೆಗೆ ಕಡಿವಾಣ ಹಾಕದ ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಸಾರಿಗೆ ಇಲಾಖೆ ನಾಮಕಾವಸ್ಥೆ ಕೆಲ ಬಸ್‌ಗಳನ್ನು ತಪಾಸಣೆ ನಡೆಸಿ ನಿಯಮದಂತೆ ಕ್ರಮ ಕೈಗೊಳ್ಳುತ್ತಾರೆ ಎಂಬ ಅಸಮಾಧಾನ ಕೇಳಿ ಬರುತ್ತದೆ. ಹೀಗಾಗಿ ಹೆಚ್ಚಿನ ದರ ವಸೂಲಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಐದು ದಿನಗಳ ಕಾಲ ವಿಶೇಷ ತಪಾಸಣಾ ಕಾರ್ಯಾಚರಣೆ ಕೈಗೊಂಡಿದೆ.
ಈ ಬಗ್ಗೆ ರಾಜ್ಯದ ಎಲ್ಲ ಜಂಟಿ ಸಾರಿಗೆ ಆಯುಕ್ತರಿಗೆ ಸೂಚನೆ ನೀಡಿರುವ ಸಾರಿಗೆ ಆಯುಕ್ತರು, ಸೆ.11ರಿಂದ 15ರವರೆಗೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸ ಬೇಕು. ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಹಿಂದಿನ ದಿನದ ಕಾರ್ಯಾಚರಣೆ ವೇಳೆ ಖಾಸಗಿ ಬಸ್‌ಗಳಿಂದಾಗಿರುವ ನಿಯಮ ಉಲ್ಲಂಘನೆ ಕುರಿತು ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
ಜತೆಗೆ ಸೆ.16ರಂದು ಐದು ದಿನಗಳ ತಪಾಸಣೆ ವೇಳೆ ನಿಯಮ ಉಲ್ಲಂಘಿಸಿದ, ಪ್ರಯಾಣಿಕರಿಂದ ವಿಪರೀತ ಪ್ರಯಾಣ ದರ ವಸೂಲಿ ಮಾಡಿದ ವಾಹನಗಳ ವಿರುದ್ಧ ಕೈಗೊಳ್ಳಲಾದ ವಿವರ ನೀಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಕಾರ್ಯಾಚರಣೆ ವೇಳೆ ನಿಯಮ ಉಲ್ಲಂಘಿಸಿದ ವಾಹನಗಳ ಜಪ್ತಿ, ದುಬಾರಿ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ.
ಸಾರಿಗೆ ಆಯುಕ್ತರ ಸೂಚನೆ
ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಮುಂಬರುವ ಸರದಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಪ್ರಯಾಣಿಕರ ವಾಹನಗಳ ಮಾಲೀಕರುಗಳು ಪ್ರಯಾಣ ದರಗಳಲ್ಲಿ ವಿಪರೀತ ಹೆಚ್ಚಳ ಮಾಡುವುದರಿಂದ ಪ್ರಯಾಣಿಕರಿಗಾಗುವ ಅನಾನುಕೂಲತೆ ತಪ್ಪಿಸಲು ಹಾಗೂ ಪ್ರಯಾಣಿಕರ ವಾಹನಗಳಲ್ಲಿ ನಿಗದಿಗಿಂತ ಅಧಿಕ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಸಂಚರಿಸುವ ಹಾಗೂ ಸದರಿ ವಾಹನಗಳಲ್ಲಿ ಸರಕು/ಸ್ಪೋಟಕ ಸಾಮಾಗ್ರಿಗಳನ್ನು ಹೇರಿಕೊಂಡು ರಹದಾರಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಸಂಚರಿಸುತ್ತಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ದಿನಾಂಕ: 11-09-2026 0 15-09-2026 ಹಮ್ಮಿಕೊಳ್ಳಲು ಸೂಚಿಸಿದೆ.

