ಭಾರತೀಯ ಚಿತ್ರರಂಗದಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಿರುವ ರಾಮಾಯಣ ಸಿನಿಮಾದಿಂದ ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಮಹತ್ವದ ಸಂಗ್ ಸೀಕ್ವೆನ್ಸ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ‘ಶಿವ ತಾಂಡವ’ ಗೀತೆಯ ವಿಡಿಯೋ ತುಣುಕು ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಶಿವಭಕ್ತ ರಾವಣನ ರೌದ್ರಾವತಾರ ಹಾಗೂ ನಿಷ್ಠೆಯನ್ನು ಬಿಂಬಿಸುವ ಈ ಒಂದು ನಿಮಿಷ ಐವತ್ತೈದು ಸೆಕೆಂಡ್ಗಳ ವಿಡಿಯೋದಲ್ಲಿ ಯಶ್ ಅವರ ಅಭಿನಯ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅಭಿಮಾನಿಗಳಿಗೆ ರೋಮಾಂಚನ ಉಂಟುಮಾಡಿದೆ. ಎ.ಆರ್. ಅಮೀನ್ ಹಾಗೂ ಹೀರಲ್ ವಿರಾಡಿಯಾ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಡಾ. ಕುಮಾರ್ ವಿಶ್ವಾಸ್ ಸಾಹಿತ್ಯ ರಚಿಸಿದ್ದು, ವಿಶಾಲ್ ದದ್ಲಾನಿ ಕಂಠದಾನ ಮಾಡಿದ್ದಾರೆ. ಶಿವನ ಪರಮಭಕ್ತನಾದ ರಾವಣನ ಶಕ್ತಿ, ಭಕ್ತಿ ಮತ್ತು ತೇಜಸ್ಸನ್ನು ವಿಶಿಷ್ಟವಾಗಿ ತೆರೆಯ ಮೇಲೆ ತರಲು ಚಿತ್ರತಂಡ ಈ ವಿಶೇಷ ಪ್ರಯತ್ನ ಮಾಡಿದೆ.
ವಿಡಿಯೋ ಬಿಡುಗಡೆಯಾಗುತ್ತಿದ್ದಂತೆಯೇ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದಶಕದ ಬಳಿಕ ಯಶ್ ಅವರ ಪೂರ್ಣ ಪ್ರಮಾಣದ ನೃತ್ಯ ರೂಪದ ಸನ್ನಿವೇಶವನ್ನು ನೋಡಲು ಸಿಕ್ಕಿದೆ ಎಂದು ಕೊಂಡಾಡುತ್ತಿರುವ ನೆಟ್ಟಿಗರು, ಸಿನಿಮಾದ ಹೈಪ್ ಮತ್ತಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಕೋಲ್ಕತ್ತಾದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ನಟ ರಣಬೀರ್ ಕಪೂರ್, ಯಶ್, ರವಿ ದುಬೆ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗವಹಿಸಿದ್ದರು.
ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಎರಡು ಭಾಗಗಳಾಗಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಶ್ವದಾದ್ಯಂತ ಭಾರತೀಯ ಸಂಸ್ಕೃತಿಯ ಹೆಮ್ಮೆಯನ್ನು ಸಾರಲು ಚಿತ್ರತಂಡ ಸಜ್ಜಾಗಿದೆ. ವಿಶೇಷವೆಂದರೆ ಆಸ್ಕರ್ ವಿಜೇತ ಹ್ಯಾನ್ಸ್ ಝಿಮ್ಮರ್ ಹಾಗೂ ಎ.ಆರ್. ರೆಹಮಾನ್ ಈ ಚಿತ್ರಕ್ಕಾಗಿ ಮೊದಲ ಬಾರಿಗೆ ಜೊತೆಯಾಗಿ ಸಂಗೀತ ನೀಡುತ್ತಿದ್ದಾರೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬದ ವೇಳೆಗೆ ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ತೆರೆಕಾಣಲಿದೆ.

