ರಾಮನಗರ: ಆಸ್ತಿ ಹಾಗೂ ಹಣದ ಆಸೆಗಾಗಿ ಸಾಕು ಮಗನೊಬ್ಬ ವೃದ್ಧ ತಾಯಿಯ ಮೇಲೆ ಅಟ್ಟಹಾಸ ಮೆರೆದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಸೋದರ ಮಾವನ ಮನೆಯಲ್ಲಿದ್ದ ತಾಯಿಯನ್ನು ಮನೆಯಿದ ಹೊರಗೆಳೆದು ತಂದು ಸಾಕುಮಗ ಹಲ್ಲೆ ನಡೆಸಿದ್ದಾನೆ. ತಾಯಿಯ ತಮ್ಮನ ಮೇಲೂ ಹಲ್ಲೆ ನಡೆಸಿದ್ದಾನೆ. ಲಾಲಾಘಟ್ಟದ ನೀಲಮ್ಮ ಹಲ್ಲೆಗೊಳಗಾದವರು. ಈಶ್ವರ ತಾಯಿಯ ಮೇಲೆಯೇ ಹಲ್ಲೆ ನಡೆಸಿದ ಸಾಕುಮಗ.
ಮನೆ ಕಾಗದ ಪತ್ರ, ಆಸ್ತಿ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದ ಸಾಕುಮಗ ಈಶ್ವರ, ಇಂದು ಏಕಾಏಕಿ ತನ್ನ ಪುಂಡ ಸ್ನೇಹಿತನೊಂದಿಗೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಅಲ್ಲದೇ ತಾಯಿತ ತಲೆ ಕೂದಲು ಹಿಡಿದು ಎಳೆದಾಡಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಮನೆಯಲ್ಲಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.
ನೀಲಮ್ಮ ತನ್ನ ಇಬ್ಬರು ಮಕ್ಕಳೊಂದಿಗೆ ಅನಾಥ ಮಗುವೊಂದನ್ನು ಸಾಕಿ ಸಲಹಿದ್ದರು. ಇದೀಗ ಬೆಳೆದು ನಿಂತಿರುವ 27 ವರ್ಷದ ಸಾಕುಮಗ ಆಸ್ತಿ, ಹಣಕ್ಕಾಗಿ ತಾಯಿಗೆ ಇನ್ನಿಲ್ಲದ ಕಷ್ಟ ಕೊಡುತ್ತಿದ್ದಾನೆ ಎನ್ನಲಾಗಿದೆ. ಚನ್ನಪಟ್ತಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.